ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದ ಸಂದರ್ಭದಲ್ಲಿ ನೀರಜ್ ಸಂಪೂರ್ಣ ಫಿಟ್ ಆಗಿರಲಿಲ್ಲ. ಹಾಗಾಗಿಯೇ ಚಿನ್ನದ ಪದಕ ಅವರ ಕೈತಪ್ಪಿದೆ. ನೀರಜ್ ಛೋಪ್ರಾ ಇಂಜಿನಲ್ ಹರ್ನಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇಂಜಿನಲ್ ಅಂಡವಾಯು ಎಂಬುದು ಕಿಬ್ಬೊಟ್ಟೆಯ ಕುಹರದ ಭಾಗವಾದ ಕರುಳು ಅಥವಾ ಓಮೆಂಟಮ್, ಕಿಬ್ಬೊಟ್ಟೆಯ ಗೋಡೆಯಲ್ಲಿನ ದುರ್ಬಲ ಸ್ಥಳದ ಮೂಲಕ ಚಾಚಿಕೊಂಡಿರುವ ಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ಸೊಂಟದ ಸುತ್ತಲೂ ಇರುತ್ತದೆ.
ಸಾಮಾನ್ಯವಾಗಿ ಕ್ರೀಡಾಪಟುಗಳು ಹೆಚ್ಚು ದೈಹಿಕ ಚಟುವಟಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಹೊಟ್ಟೆಯ ಮೇಲೆ ಒತ್ತಡ ಬೀಳುವುದರಿಂದ ಈ ರೀತಿಯ ಸಮಸ್ಯೆ ಕ್ರೀಡಾಪಟುಗಳಲ್ಲಿ ಸಾಮಾನ್ಯವಾಗಿದೆ. ಈ ಕಾಯಿಲೆಯಿಂದಾಗಿ ಸೊಂಟದ ಸುತ್ತಲೂ ನೋವು, ಅಸ್ವಸ್ಥತೆ ಅಥವಾ ಊತ ಉಂಟಾಗುತ್ತದೆ. ಒತ್ತಡ, ಕೆಮ್ಮು ಅಥವಾ ವ್ಯಾಯಾಮದಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ.
ಪುರುಷರಲ್ಲೇ ಹೆಚ್ಚು ಈ ಕಾಯಿಲೆ!
ಇಂಜಿನಲ್ ಹರ್ನಿಯಾ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಾದಂತೆ ಮಲಬದ್ಧತೆ, ಕೆಮ್ಮು ಅಥವಾ ಮೂತ್ರ ವಿಸರ್ಜನೆಯ ಸಮಯದಲ್ಲಿ ಅತಿಯಾದ ಒತ್ತಡದಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
ಇದಕ್ಕೆ ಚಿಕಿತ್ಸೆ ಏನು?
ಈ ಹರ್ನಿಯಾಗೆ ಶಸ್ತ್ರಚಿಕಿತ್ಸೆಯೇ ಮದ್ದು. ಇತ್ತೀಚಿನ ದಿನಗಳಲ್ಲಿ ಇದನ್ನು ಲ್ಯಾಪರೊಸ್ಕೋಪಿ ಅಥವಾ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಮಾಡಲಾಗುತ್ತದೆ. ಹಾಗಾಗಿ ಬಹಳ ಕಡಿಮೆ ಸಮಯದಲ್ಲಿ ಚೇತರಿಸಿಕೊಳ್ಳಬಹುದು, ನೋವು ಸಹ ಕಡಿಮೆಯಿರುತ್ತದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಸರಿಯಾಗಿ ವಿಶ್ರಾಂತಿ ಪಡೆದರೆ ಬಹಳ ಬೇಗ ಇದು ವಾಸಿಯಾಗುತ್ತದೆ. ಅಥ್ಲೀಟ್‌ಗಳು ಕೂಡ ಅತಿ ಶೀಘ್ರದಲ್ಲಿ ಮತ್ತೆ ಅಭ್ಯಾಸ ಪ್ರಾರಂಭಿಸಬಹುದು.
ಈ ರೀತಿಯ ಹರ್ನಿಯಾ ಕ್ರೀಡಾಪಟುಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಕ್ರೀಡೆಯತ್ತ ಗಮನ ಹರಿಸುವುದರ ಜೊತೆಗೆ ಅವರು ರೋಗದ ವಿರುದ್ಧವೂ ಹೋರಾಡಬೇಕಾಗುತ್ತದೆ. ನೀರಜ್ ಚೋಪ್ರಾ ಬಹಳ ಸಮಯದಿಂದ ಈ ತೊಂದರೆ ಎದುರಿಸುತ್ತಿದ್ದು, ಇದು ಅವರ ಆಟದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಶೀಘ್ರವೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.