ಪಾಣಿಪತ್: ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ತೀವ್ರ ಜ್ವರದಿಂದಾಗಿ ಪಾಣಿಪತ್ ನಲ್ಲಿ ನಡೆಯುತ್ತಿದ್ದ ಸಮಾರಂಭವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಆಸ್ಪತ್ರೆಗೆ ಹೋದ ಘಟನೆ ನಡೆದಿದೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಕೋವಿಡ್ -19 ಪರೀಕ್ಷೆಗೆ ಒಳಪಟ್ಟಿದ್ದ ಚಿನ್ನದ ಹುಡುಗ ನೀರಜ್ ಚೋಪ್ರಾರ ವರದಿ ನೆಗೆಟಿವ್ ಬಂದಿತ್ತು. ಹೀಗಾಗಿ ಪಾಣಿಪತ್ ನಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಆದರೆ ಈ ವೇಳೆ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಕೂಡಲೇ ವೇದಿಕೆಯಿಂದ ಇಳಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನು ನೀರಜ್ ಕುಟುಂಬಸ್ಥರ ಮಾಹಿತಿ ಪ್ರಕಾರ, “ಸಮಾರಂಭದಲ್ಲಿ ಅವರು ತುಂಬಾ ದಣಿದಂತೆ ಕಾಣುತ್ತಿದ್ದರು. ಏಕೆಂದರೆ ಬೆಳಿಗ್ಗೆಯಿಂದ ದೆಹಲಿಯಿಂದ ಪಾಣಿಪತ್ ವರೆಗೆ ಕಾರ್ ರ್ಯಾಲಿಯಲ್ಲಿ ಅವರು ಪಾಲ್ಗೊಂಡಿದ್ದರು. ಹೀಗಾಗಿ ಪಾಣಿಪತ್ ತಲುಪಲು ಆರು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು” ಎಂದು ಹೇಳಿದ್ದಾರೆ.
ಪದೇ ಪದೇ ನೌಕರಿ ಬದಲಿಸ್ತಿದ್ದರೆ ಪಿಎಫ್ ಖಾತೆಯ ಈ ವಿಷ್ಯ ತಿಳಿದಿರಲಿ
ಸದ್ಯ ನೀರಜ್ ಚೋಪ್ರಾ ಅವರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಹಲವಾರು ಅಭಿನಂದನಾ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ನೀರಜ್ ಅವರ ಊರಿನಲ್ಲಿ ಭವ್ಯ ಸ್ವಾಗತಕ್ಕಾಗಿ ಸಿದ್ಧತೆಗಳು ನಡೆದಿವೆ.
“ನೀರಜ್ ಭವ್ಯವಾದ ಸ್ವಾಗತವನ್ನು ಸ್ವೀಕರಿಸಲಿದ್ದಾರೆ. ನಾನು ಅವನಿಗೆ ‘ಚುರ್ಮ’ ತಯಾರಿಸಿದ್ದೇನೆ. ನಾವು ಆತನ ಚಿನ್ನದ ಪದಕವನ್ನು ದೇವಸ್ಥಾನದಲ್ಲಿ ಇರಿಸುತ್ತೇವೆ. ಏಕೆಂದರೆ ದೇವರ ಆಶೀರ್ವಾದದ ನಂತರವೇ ಅವನು ಇಷ್ಟು ಎತ್ತರಕ್ಕೆ ತಲುಪಿದ್ದಾನೆ. ನಾನು ಅವನ ಆಗಮನವನ್ನು ಎದುರು ನೋಡುತ್ತಿದ್ದೇನೆ” ಎಂದು ನೀರಜ್ ತಾಯಿ ಸರೋಜ್ ದೇವಿ ತಿಳಿಸಿದ್ದಾರೆ.
“ನಾವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸ್ವಾಗತವು ಅದ್ಧೂರಿಯಾಗಿರಲಿದ್ದು, ಎಲ್ಲಾ ಸಂಬಂಧಿಕರನ್ನು ಮತ್ತು ಇಡೀ ಗ್ರಾಮದ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಚಿನ್ನದ ಪದಕವನ್ನು ದೇವಸ್ಥಾನದಲ್ಲಿ ಇರಿಸಲಾಗುತ್ತದೆ ಹಾಗೂ ಕೆಲವು ಆಚರಣೆಗಳನ್ನು ಮಾಡಲಾಗುತ್ತದೆ. ಸುಮಾರು 25 ರಿಂದ 30 ಸಾವಿರ ಜನರಿಗೆ ಆಗುವಷ್ಟು ಆಹಾರದ ಸಿದ್ಧತೆ ಮಾಡಲಾಗಿದ್ದು, 150 ಮಂದಿ ಆಹಾರ ತಯಾರಿಸಲಿದ್ದಾರೆ. ನೀರಜ್ ಪದಕ ಗೆದ್ದ ದಿನದಿಂದ ಇಡೀ ಗ್ರಾಮವೇ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ” ಎಂದು ನೀರಜ್ ಸಂಬಂಧಿ ಹೇಳಿದರು.
ಇನ್ನು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ, “ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದು ಒಂದು ಗೌರವ. ಒಬ್ಬ ಕ್ರೀಡಾಪಟುವಾಗಿ ಮತ್ತು ಸೈನಿಕನಾಗಿ, ರಾಷ್ಟ್ರಧ್ವಜವು ಎತ್ತರಕ್ಕೆ ಹಾರುವುದನ್ನು ನೋಡಿದಾಗ ನನ್ನ ಹೃದಯ ತುಂಬಿ ಬರುತ್ತದೆ. ಜೈ ಹಿಂದ್” ಎಂದು ಸ್ವಾತಂತ್ರ್ಯ ದಿನಾಚರಣೆಯ ನಂತರ ಟ್ವೀಟ್ ಮಾಡಿದ್ದರು.