ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ 35% ಹೆಚ್ಚಳ ಕಾಣುತ್ತಿದ್ದು, 2023ರ ಅಂತ್ಯಕ್ಕೆ 14 ದಶಲಕ್ಷ ಇವಿಗಳ ಮಾರಾಟವಾಗುವ ನಿರೀಕ್ಷೆ ಇದೆ.
ಇವಿಗಳ ಖರೀದಿಗೆ ದೇಶಗಳ ಸರ್ಕಾರಗಳ ಮಟ್ಟದಲ್ಲಿ ನೀತಿಗಳು ಹಾಗೂ ಪ್ರೋತ್ಸಾಹಗಳಿಂದ ಇಷ್ಟೆಲ್ಲಾ ಆಗುತ್ತಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ತಿಳಿಸಿದೆ.
2022ರಲ್ಲಿ ಒಟ್ಟಾರೆ ಮಾರಾಟಗೊಂಡ ಕಾರುಗಳ ಪೈಕಿ ಎಲೆಕ್ಟ್ರಿಕ್ ಕಾರುಗಳ ಪಾಲು 14% ಇದ್ದರೆ 2023ರಲ್ಲಿ ಈ ಪ್ರಮಾಣವು 18% ಮುಟ್ಟಲಿದ್ದು, ಪ್ರತಿ ಐದು ಕಾರುಗಳಲ್ಲಿ ಒಂದು ಇವಿ ಆಗಿರಲಿದೆ ಎಂದು ಐಇಎ ಪ್ರಕಟಿಸಿದ ವರದಿಯಿಂದ ತಿಳಿದು ಬಂದಿದೆ.
ತೈಲ ಬೆಲೆಯಲ್ಲಿ ನಿರಂತರ ಏರಿಕೆ ಹಾಗೂ ಸರ್ಕಾರಗಳ ಉತ್ತೇಜನ ಪರಿಣಾಮ 2030ರ ವೇಳೆಗೆ ಮಾರಾಟವಾಗುವ ಕಾರುಗಳ ಪೈಕಿ 35% ಪಾಲು ಇವಿಗಳದ್ದೇ ಆಗಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾದಲ್ಲಿ, ಪ್ರತಿನಿತ್ಯ 5 ದಶಲಕ್ಷ ಬ್ಯಾರೆಲ್‌ಗಳಷ್ಟು ಕಡಿಮೆ ತೈಲವನ್ನು ಮನುಕುಲ ಬಳಸುವ ಸಾಧ್ಯತೆ ಇದೆ.
ಇದೇ ವೇಳೆ, ಜಾಗತಿಕ ಮಟ್ಟದಲ್ಲಿ ಇವಿ ಕಾರುಗಳ ಮಾರುಕಟ್ಟೆಯಲ್ಲಿ ಚೀನಾದ ಪಾಲು 40% ಇದ್ದರೆ ಅಮೆರಿಕದ ಪಾಲು 20% ಇರಲಿದೆ ಎಂದು ತಿಳಿದು ಬಂದಿದೆ.