
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡೂವರೆ ವರ್ಷದಲ್ಲಿ 38 ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅವರ ವಿದೇಶ ಪ್ರವಾಸಕ್ಕೆ 258 ಕೋಟಿ ರೂ. ಖರ್ಚಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವರಾದ ಪಬಿತ್ರಾ ಮಾರ್ಗರಿಟಾ ಸಂಸತ್ ಗೆ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಪ್ರಧಾನಿ ಕೈಗೊಂಡ ವಿದೇಶ ಪ್ರವಾಸಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದು, ಅವರ ಪ್ರಶ್ನೆಗೆ ಪಬಿತ್ರಾ ಮಾರ್ಗರಿಟಾ ಉತ್ತರ ನೀಡಿದ್ದಾರೆ. 2022ರ ಮೇ ತಿಂಗಳಿಂದ 2024ರ ಡಿಸೆಂಬರ್ ಅವಧಿಯಲ್ಲಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ರೂ. ಖರ್ಚಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕಕ್ಕೆ ಮೋದಿ ಭೇಟಿ ನೀಡಿದಾಗಲೇ ಹೆಚ್ಚು ಹಣ ಖರ್ಚಾಗಿದೆ. 2023ರ ಜೂನ್ ನಲ್ಲಿ ಕೈಗೊಂಡ ಅಮೆರಿಕ ಪ್ರವಾಸಕ್ಕೆ 22.89 ಕೋಟಿ ರೂಪಾಯಿ ಖರ್ಚಾಗಿದೆ. 2024ರ ಸೆಪ್ಟಂಬರ್ ನಲ್ಲಿ ಅಮೆರಿಕಕ್ಕೆ ನೀಡಿದ ಭೇಟಿಗೆ 15.33 ಕೋಟಿ ರೂಪಾಯಿ ಖರ್ಚಾಗಿದೆ.
ಕಳೆದ ಎರಡೂವರೆ ವರ್ಷದಲ್ಲಿ ಮೋದಿ ಅವರು ಅಮೆರಿಕ, ಜರ್ಮನಿ, ಕುವೈತ್, ಫ್ರಾನ್ಸ್, ಡೆನ್ಮಾರ್ಕ್, ಯುಎಇ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಗ್ರೀಸ್, ಪೋಲೆಂಡ್, ರಷ್ಯಾ, ಬ್ರೆಜಿಲ್, ಇಟಲಿ, ಗಯಾನ, ನೇಪಾಳ ಸೇರಿ ಹಲವು ದೇಶಗಳಿಗೆ ಭೇಟಿ ನೀಡಿದ್ದಾರೆ.