ನವದೆಹಲಿ: ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಎಚ್ಚರಿಕೆ ಸಂದೇಶ ನೀಡುವ ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಎಮರ್ಜೆನ್ಸಿ ಅಲರ್ಟ್ ವ್ಯವಸ್ಥೆ ರೂಪಿಸಿದ್ದು, ಪರೀಕ್ಷಾರ್ಥ ಪ್ರಯೋಗವನ್ನು ಶುಕ್ರವಾರ ದೇಶಾದ್ಯಂತ ನಡೆಸಲಾಗಿದೆ.
ದೂರ ಸಂಪರ್ಕ ಇಲಾಖೆ ಪ್ರಯೋಗ ನಡೆಸಿದ್ದು, ಎಮರ್ಜೆನ್ಸಿ ಅಲರ್ಟ್ ಸೀವಿಯರ್(ತುರ್ತು ಎಚ್ಚರಿಕೆ)ಎನ್ನುವ ಮಾದರಿ ಸಂದೇಶವನ್ನು ಮೊಬೈಲ್ ಬಳಕೆದಾರರಿಗೆ ರವಾನಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಈ ಸಂದೇಶವನ್ನು ಮೊಬೈಲ್ ಫೋನ್ ಗಳಿಗೆ ಕಳುಹಿಸಲಾಗಿದೆ. ಸಂದೇಶ ತಲುಪಿದ ಕೂಡಲೇ ಮೊಬೈಲ್ ಫೋನ್ ಗಳು ಜೋರು ಶಬ್ದದೊಂದಿಗೆ ಕಂಪಿಸಿ ಜನರನ್ನು ಎಚ್ಚರಿಸಿವೆ.
ದೂರಸಂಪರ್ಕ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಎಮರ್ಜೆನ್ಸಿ ಅಲರ್ಟ್ ತುರ್ತು ಸಂದೇಶ ರವಾನೆ ಮಾಡುವ ಸೆಲ್ ಬ್ರಾಡ್ ಕಾಸ್ಟ್ ಅಲರ್ಟ್ ಸಿಸ್ಟಂನ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಭಾರತದಲ್ಲಿನ ಅನೇಕ ಮೊಬೈಲ್ ಬಳಕೆದಾರರು ಸರ್ಕಾರದಿಂದ ತೀವ್ರ ತುರ್ತು ಎಚ್ಚರಿಕೆಯನ್ನು ಸ್ವೀಕರಿಸಿದರು. ಇದು ದೇಶದ ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆಯ ಭಾಗವಾಗಿತ್ತು, ಇದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) ನಿಯೋಜಿಸುತ್ತಿದೆ. ಪರೀಕ್ಷಾ ಸಂದೇಶವನ್ನು ಭಾರತದಾದ್ಯಂತ ಸ್ಮಾರ್ಟ್‌ಫೋನ್‌ಗಗಳಿಗೆ ಕಳುಹಿಸಲಾಗಿದೆ ಮತ್ತು ಇದು ಬಳಕೆದಾರರ ಫೋನ್‌ಗಳು ಜೋರಾಗಿ ಬೀಪ್ ಅನ್ನು ಹೊರಸೂಸುವಂತೆ ಮಾಡಿತು. ಎಚ್ಚರಿಕೆಯ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಮತ್ತು ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು NDMA ಈ ಪರೀಕ್ಷೆಯನ್ನು ಬಳಸುತ್ತಿದೆ.