ಒಡಿಶಾದ ಉನ್ನತ ಶಿಕ್ಷಣ ಸಚಿವ ಕುಡಿದು ನೃತ್ಯ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು ರಾಜಕೀಯ ಬಣ್ಣ ಬಳಿದುಕೊಂಡಿದೆ.
ಒಡಿಶಾ ಸರ್ಕಾರದಲ್ಲಿ ಇತ್ತೀಚೆಗೆ ಸಚಿವರಾದ ಸೂರಜ್ ಸೂರ್ಯವಂಶಿ ಎಂದು ಗುರುತಿಸಲಾದ ವ್ಯಕ್ತಿ ಕುಡಿದು ಡ್ಯಾನ್ಸ್ ಮಾಡುತ್ತಿದ್ದು ಅವರ ಪಕ್ಕದಲ್ಲಿ ಮದ್ಯದ ಬಾಟಲಿಗಳಿವೆ ಎಂದು ಕಾಂಗ್ರೆಸ್ ಡಿಜಿಟಲ್ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೆಟ್ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿರುವುದು ಸೂರಜ್ ಸೂರ್ಯವಂಶಿ ಎಂದು ಆರೋಪಿಸಿದ್ದು, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ರಾಜಕೀಯ ವಿರೋಧಿಗಳು ಸೂರ್ಯವಂಶಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅವರ ನಡವಳಿಕೆಯು ಸಚಿವ ಸ್ಥಾನಕ್ಕೆ ಯೋಗ್ಯವಾಗಿಲ್ಲ ಇವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿದ್ದಾರೆ.
ಒಡಿಶಾ ಸರ್ಕಾರದಲ್ಲಿ ಸೂರಜ್ ಸೂರ್ಯವಂಶಿ ಉನ್ನತ ಶಿಕ್ಷಣ, ಯುವಜನ ಮತ್ತು ಕ್ರೀಡಾ ಸಚಿವ ಸ್ಥಾನದ ಜೊತೆಗೆ ಒಡಿಯಾ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಚಿವರಾಗಿದ್ದಾರೆ. ವೀಡಿಯೊದಲ್ಲಿರುವ ವ್ಯಕ್ತಿ ಸೂರಜ್ ಸೂರ್ಯವಂಶಿ ಎಂದು ಅಧಿಕೃವಾಗಿಲ್ಲ. ಜೊತೆಗೆ ಈ ಬಗ್ಗೆ ಸಚಿವ ಸೂರಜ್ ಸೂರ್ಯವಂಶಿಯಾಗಲೀ, ಒಡಿಶಾ ಸರ್ಕಾರವಾಗಲೀ ಪ್ರತಿಕ್ರಿಯಿಸಿಲ್ಲ. ಈ ವಿಡಿಯೋಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಶೇಷವಾಗಿ ಉನ್ನತ ಶಿಕ್ಷಣ ಮತ್ತು ಯುವಜನ ವ್ಯವಹಾರಗಳಂತಹ ಇಲಾಖೆಯನ್ನು ಅವರಿಗೆ ನೀಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಯಾರಾದರೂ ಶಿಕ್ಷಣ ಸಚಿವರಾಗಲು ಅನರ್ಹರು ಎಂದು ಪ್ರತಿಪಾದಿಸಿ ಅವರನ್ನು ಸಂಪುಟದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಅನೇಕರು ಸಚಿವರನ್ನು ಸಮರ್ಥಿಸಿಕೊಡಿದ್ದು, ವೈಯಕ್ತಿಕ ಜೀವನದಲ್ಲಿ ಅವರು ಮದ್ಯ ಸೇವಿಸಿದ್ದರೆ, ಅವರನ್ನು ಸಾರ್ವಜನಿಕ ಕಚೇರಿಯಿಂದ ಅನರ್ಹಗೊಳಿಸಬಾರದು ಎಂದಿದ್ದಾರೆ.
ಮತ್ತೊಬ್ಬರು ಮದ್ಯದ ಬಾಟಲಿಗಳ ಮಧ್ಯೆ ರಾಜೀವ್ ಗಾಂಧಿಯವರ ಫೋಟೋ ಇರುವುದನ್ನು ಕಂಡು ಇದು ರಾಜಕೀಯ ಪ್ರೇರಿತ ಕೃತ್ಯ ಎಂದಿದ್ದಾರೆ. ಒಡಿಶಾದಲ್ಲಿ ಹೊಸದಾಗಿ ರಚನೆಯಾದ ಮೋಹನ್ ಚರಣ್ ಮಾಜಿ ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವರಾಗಿ ಸೂರ್ಯವಂಶಿ ಸೂರಜ್ ನೇಮಕವಾದಾಗಿನಿಂದ ಗಮನ ಸೆಳೆದಿದ್ದಾರೆ. ವೀಡಿಯೊ ಹೊಸ ಆಯಾಮವನ್ನು ಸೃಷ್ಟಿಸಿದ್ದು ಖಾಸಗಿತನ, ವೈಯಕ್ತಿಕ ನಡವಳಿಕೆ ಮತ್ತು ಸಾರ್ವಜನಿಕ ಪ್ರತಿನಿಧಿಗಳ ವರ್ತನೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.