ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 543 ಸ್ಥಾನಗಳಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕಿದೆ. ಎನ್.ಡಿ.ಎ. 291, ಇಂಡಿಯಾ ಮೈತ್ರಿಕೂಟ 234, ಇತರರು 18 ಸ್ಥಾನ ಗಳಿಸಿದ್ದಾರೆ.
ಎನ್.ಡಿ.ಎ. ಮೈತ್ರಿಕೂಟ ಬಹುಮತ ಪಡೆದುಕೊಂಡಿದ್ದರೂ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಯ ಕಸರತ್ತು ನಡೆಸಿದೆ. ಜಂಪಿಂಗ್ ಸ್ಟಾರ್ ಎಂದೇ ಖ್ಯಾತರಾದ ನಿತೀಶ್ ಕುಮಾರ್ ಅವರನ್ನು ಸೆಳೆಯಲು ಇಂಡಿಯಾ ಮೈತ್ರಿಕೂಟ ಪ್ಲಾನ್ ಮಾಡಿಕೊಂಡಿದ್ದು, ಉಪ ಪ್ರಧಾನಿ ಹುದ್ದೆಯ ಆಫರ್ ನೀಡಿದೆ. ಅನುಕೂಲ ಸಿಂಧು ರಾಜಕಾರಣಿ ಎಂದೇ ಖ್ಯಾತರಾದ ನಿತೀಶ್ ಕುಮಾರ್ ಈ ಹಿಂದೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಕಡಿತಕೊಂಡು ಆರ್.ಜೆ.ಡಿ.ಯೊಂದಿಗೆ ಸರ್ಕಾರ ರಚಿಸಿದ್ದರು. ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ನಂತರ ದಿಢೀರ್ ಮೈತ್ರಿ ಬದಲಾವಣೆ ಮಾಡಿದ ನಿತೀಶ್ ಕುಮಾರ್ ಬಿಜೆಪಿ ಸಖ್ಯ ಬೆಳೆಸಿ ಎನ್‌ಡಿಎ ಸೇರಿದ್ದರು.
ಇದೀಗ ಅವರಿಗೆ ಇಂಡಿಯಾ ಮೈತ್ರಿಕೂಟದಿಂದ ಉಪ ಪ್ರಧಾನಿ ಹುದ್ದೆಯ ಆಫರ್ ನೀಡಿರುವುದರಿಂದ ನಿಲುವು ಬದಲಿಸುವ ಸಾಧ್ಯತೆ ಇದೆ. ಇನ್ನು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡ ಎನ್.ಡಿ.ಎ.ಯಲ್ಲೇ ಮುಂದುವರೆಯುವುದಾಗಿ ಹೇಳಿದ್ದರೂ ಇಂಡಿಯಾ ಮೈತ್ರಿಕೂಟದ ನಾಯಕರು ಅವರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದಾರೆ.
ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಜೆಡಿಯು ನಾಯಕ ನಿತೀಶ್ ಕುಮಾರ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಸೇರಿದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ವ ಸಮ್ಮತ ಅಭ್ಯರ್ಥಿಯಾಗಿ ಖರ್ಗೆಯವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಚಂದ್ರಬಾಬು ನಾಯ್ಡುಗೆ ಆಫರ್ ಸಿಕ್ಕರೂ ಸಿಗಬಹುದು. ಹಾಗಾದರೆ ದಕ್ಷಿಣ ಭಾರತದಿಂದ ದೇವೇಗೌಡರ ನಂತರ ಮತ್ತೊಬ್ಬರು ಪ್ರಧಾನಿಯಾಗುವ ಅವಕಾಶ ಇದೆ.
ಇಂಡಿಯಾ ಮೈತ್ರಿಕೂಟದ ನಾಯಕರಿಂದ ಸರ್ವ ಸಮ್ಮತ ಅಭ್ಯರ್ಥಿಯಾಗಿ ಖರ್ಗೆ ಆಯ್ಕೆಯಾದಲ್ಲಿ ಕರ್ನಾಟಕದಿಂದ ಮತ್ತೊಬ್ಬರು ಪ್ರಧಾನಿ ಹುದ್ದೆಗೆ ಏರಲಿದ್ದಾರೆ. ಸ್ವಂತ ಬಲದ ಮೇಲೆ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಮೈತ್ರಿಕೂಟದ ಬೆಂಬಲ ಬೇಕೇ ಬೇಕಿದೆ. ಒಂದು ವೇಳೆ ಟಿಡಿಪಿ, ಜೆಡಿಯು ಪಕ್ಷಗಳು ಎನ್.ಡಿ.ಎ.ಯಿಂದ ಹೊರಬಂದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಬಹುದು. ರಾಜಕೀಯದಲ್ಲಿ ಏನಾದರೂ ಆಗಬಹುದಾಗಿದ್ದು, ನಾಳಿನ ಬೆಳವಣಿಗೆ ಭಾರಿ ಕುತೂಹಲ ಮೂಡಿಸಿದೆ.