
ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಜುಲೈ 22 ರಿಂದ ಆಗಸ್ಟ್ 12ರ ವರೆಗೆ 19 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಆಡಳಿತಾರೂಢ ಎನ್.ಡಿ.ಎ. ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ನೀಟ್, ನೆಟ್, ಆಗ್ನಿವೀರರು, ಐಎಎಸ್ ನೇಮಕಾತಿ ಗೊಂದಲ, ಮಣಿಪುರ ಹಿಂಸಾಚಾರ, ಬೆಲೆ ಏರಿಕೆ ಸೇರಿ ಹಲವು ಬಗ್ಗೆ ಭಾರಿ ಜಟಾಪಟಿ ನಡೆಯುವ ಸಾಧ್ಯತೆ ಇದೆ.
ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಿದ್ದಾರೆ. ಈ ಅಧಿವೇಶನದಲ್ಲಿ ಆರು ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.