ನವದೆಹಲಿ: ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬುಧವಾರ ದೆಹಲಿಯಲ್ಲಿ ಸರ್ಕಾರ ರಚನೆಯ ಬಗ್ಗೆ ಎನ್.ಡಿ.ಎ. ಮತ್ತು ಇಂಡಿಯಾ ಮೈತ್ರಿಕೂಟದ ಸಭೆಗಳು ನಿಗದಿಯಾಗಿವೆ.
ಬುಧವಾರ ಬೆಳಗ್ಗೆ 11:30 ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದೆ. ಸಂಪುಟ ಸಭೆಯ ನಂತರ ಎನ್.ಡಿ.ಎ. ಮಿತ್ರ ಪಕ್ಷಗಳ ನಿರ್ಣಾಯಕ ಸಭೆ ನಡೆಯಲಿದೆ. ಸಂಜೆ 6 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆಯಲಿದ್ದು, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಮಾನ ಮನಸ್ಕರ ಸಮಾಲೋಚನೆ ನಡೆಯಲಿದೆ.
ಎನ್.ಡಿ.ಎ. ಬಹುಮತ ಪಡೆದುಕೊಂಡಿದ್ದರೂ ಬಿಜೆಪಿ ಅಧಿಕಾರಕ್ಕೇರಲು ಮಿತ್ರ ಪಕ್ಷಗಳ ಬೆಂಬಲ ಅಗತ್ಯವಾಗಿದೆ. ಹೀಗಾಗಿ ಜೆಡಿಯುಸ್ ಮತ್ತು ಟಿಡಿಪಿ ನಾಯಕರದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರದ ಸಭೆಗೆ ಆಗಮಿಸುವಂತೆ ಮಾಹಿತಿ ನೀಡಿದ್ದಾರೆ.
ಸರ್ಕಾರ ರಚನೆ ಕಾರ್ಯತಂತ್ರದ ಸುಳಿವು ಬಿಟ್ಟುಕೊಡದ ಮಲ್ಲಿಕಾರ್ಜುನ ಖರ್ಗೆ, ಹೊಸ ಪಾರ್ಟನರ್ ಗಳು ನಮಗೆ ಜೊತೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಸರ್ಕಾರ ರಚನೆ ಮಾಡುವತ್ತ ಉಭಯ ಬಣಗಳ ನಾಯಕರು ಕಾರ್ಯತಂತ್ರ ರೂಪಿಸಿದ್ದು, ಇಂದು ಮಹತ್ವದ ತೀರ್ಮಾನ ಹೊರ ಬೀಳುವ ನಿರೀಕ್ಷೆ ಇದೆ.