ನವದೆಹಲಿ: ಆಕ್ಷೇಪಾರ್ಹ ವಿಡಿಯೋ ಸೋರಿಕೆಯಾಗಿಲ್ಲ, ಆರೋಪಿ ಹುಡುಗಿ ತನ್ನದೇ ವಿಡಿಯೋ ಮಾಡಿದ್ದಾಳೆ ಎಂದು ಮೊಹಾಲಿ ಪೊಲೀಸರು ಹೇಳಿದ್ದಾರೆ
ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ಕೆಲವು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೋಗಳು ಸೋರಿಕೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಕೆಲವು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ ವರದಿಗಳ ಬಗ್ಗೆ ಎಫ್‌ಐಆರ್ ದಾಖಲಿಸಲು ಸೂಚಿಸಿದೆ.
ಕೆಲವು ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳುವ ಹಲವಾರು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ನೋಡಲಾಗಿದೆ ಎಂದು ಆಯೋಗ ಹೇಳಿದೆ.
ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮಾ ಅವರು, ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ವಿಷಯವನ್ನು ಕಟ್ಟುನಿಟ್ಟಾಗಿ ನಿಭಾಯಿಸುವಂತೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಸಂತ್ರಸ್ತರಿಗೆ ಸರಿಯಾದ ಸಮಾಲೋಚನೆ ನೀಡಬೇಕು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎನ್‌ಸಿಡಬ್ಲ್ಯೂ ಹೇಳಿದೆ.
ಮೊಹಾಲಿ ಎಸ್‌ಎಸ್‌ಪಿ ವಿವೇಕ್ ಸೋನಿ ಅವರು ಪ್ರಾಥಮಿಕ ತನಿಖೆಯ ನಂತರ ಆರೋಪಿಯ ಒಂದು ವಿಡಿಯೋ ಮಾತ್ರ ಪೊಲೀಸರಿಗೆ ಸಿಕ್ಕಿದ್ದು, ಬೇರೆಯವರ ವಿಡಿಯೋ ಇಲ್ಲ ಎಂದು ಹೇಳಿದ್ದಾರೆ.
ಇದುವರೆಗೆ ನಮ್ಮ ತನಿಖೆಯಲ್ಲಿ, ಆರೋಪಿಯ ಒಂದು ವಿಡಿಯೋ ಮಾತ್ರ ಇದೆ ಎಂದು ನಾವು ಕಂಡುಕೊಂಡಿದ್ದೇವೆ. ಅವಳು ಬೇರೆಯವರ ಯಾವುದೇ ವಿಡಿಯೋ ರೆಕಾರ್ಡ್ ಮಾಡಿಲ್ಲ. ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಮೊಬೈಲ್ ಫೋನ್ ಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.