
ನಟಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಆರೋಪ ಹೊತ್ತಿರುವ ಮಲಯಾಳಂ ನಟ ದಿಲೀಪ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕಿ ಖುಷ್ಬು ಸುಂದರ್ ಟೀಕೆಗೆ ಗುರಿಯಾಗಿದ್ದಾರೆ. ದಿಲೀಪ್ ಅವರೊಂದಿಗೆ ಫೋಟೋದಲ್ಲಿ ನಟಿ ಸುಹಾಸಿನಿ ಮಣಿರತ್ನಂ, ಜಾಕಿ ಶ್ರಾಫ್, ಅಂಬಿಕಾ ಸೇರಿದಂತೆ ಇತರ ಕಲಾವಿದರು ಕಾಣಿಸಿಕೊಂಡಿದ್ದಾರೆ.
ಫೋಟೋವನ್ನು ಹಂಚಿಕೊಂಡ ಪತ್ರಕರ್ತೆ ಸುಭಾ ಜಯನಾಗರಾಜ, ಲೈಂಗಿಕ ಕಿರುಕುಳದ ಮಾಸ್ಟರ್‌ಮೈಂಡ್ ಆರೋಪ ಹೊತ್ತಿರುವ ನಟನ ಜೊತೆ ಹಲವು ಕಲಾವಿದರು ಕಾಣಿಸಿಕೊಳ್ಳಲು ಪ್ರಚೋದಿಸಿದ್ದೇನು? ಎಂದು ಟೀಕಿಸಿದ್ದಾರೆ.
“ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ದಿಲೀಪ್ ಪಕ್ಕದಲ್ಲಿ ನಿಂತಿದ್ದಾರೆ. ಇನ್ನುಳಿದಂತೆ ಸುಹಾಸಿನಿ ಮತ್ತು ಜಾಕಿ ಶ್ರಾಫ್ ಕೂಡ ಇದ್ದಾರೆ. ಈ ದಿನಗಳಲ್ಲಿ ಎಲ್ಲವೂ ನಡೆಯುತ್ತಿದೆ ಎಂದು ನನಗೆ ತಿಳಿದಿದೆ, ಆದರೆ ಕನಿಷ್ಠ ಜ್ಞಾನದ ಬಗ್ಗೆ ಕಾಳಜಿ ವಹಿಸಿ” ಎಂದಿದ್ದಾರೆ.
ಚಿತ್ರಕ್ಕೆ ಪ್ರತಿಕ್ರಿಯಿಸಿದ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಕಲಾವಿದರನ್ನು ಟೀಕಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬದುಕುಳಿದವರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಕಲಾವಿದರು ಕಾಳಜಿ ವಹಿಸುವುದಿಲ್ಲ ಎಂದು ಟೀಕಿಸಿದ್ದಾರೆ.
2017 ರಲ್ಲಿ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಕೇಳಿಬಂದಿದ್ದು ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.