ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಅಜಿತ್ ಪವಾರ್ ನೇತೃತ್ವದ ಬಣದ ತಾಲೂಕು ಅಧ್ಯಕ್ಷ ಸಚಿನ್ ಕುರ್ಮಿ ಅವರನ್ನು ಹತ್ಯೆ ಮಾಡಲಾಗಿದೆ.
2-3 ಅಪರಿಚಿತ ದುಷ್ಕರ್ಮಿಗಳಿಂದ ದಾಳಿ ನಡೆಸಿದ್ದು, ಶನಿವಾರ ನಸುಕಿನ ವೇಳೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಬೈಕುಲ್ಲಾ ಪ್ರದೇಶದ ಎಂಹೆಚ್‌ಎಡಿಎ ಕಾಲೋನಿಯ ಹಿಂದೆ ಈ ದಾಳಿ ನಡೆದಿದ್ದು, ಕುರ್ಮಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ.
ಪೊಲೀಸರ ಪ್ರಕಾರ, ಘಟನೆ ಮಧ್ಯರಾತ್ರಿ 12:30 ರ ಸುಮಾರಿಗೆ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಕುರ್ಮಿ ಗಂಭೀರವಾಗಿ ಗಾಯಗೊಂಡಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಪೊಲೀಸ್ ವಾಹನದಲ್ಲಿ ಜೆಜೆ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ತ್ವರಿತ ಪ್ರಕ್ರಿಯೆ ಹೊರತಾಗಿಯೂ, ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸಾವಿನ ಕಾರಣವನ್ನು ಮತ್ತಷ್ಟು ತನಿಖೆ ಮಾಡಲು ಪ್ರಸ್ತುತ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಸಚಿನ್ ಕುರ್ಮಿ ಹತ್ಯೆ ಪ್ರಕರಣದಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.