
ನವದೆಹಲಿ: ಸಹಾಯಕ ಸಂತಾನೋತ್ಪತ್ತಿ ತಂತ್ರ -ಎಆರ್‌ಟಿ ಪ್ರಕ್ರಿಯೆಯಲ್ಲಿ ಬೇರೆ ವ್ಯಕ್ತಿಯ ವೀರ್ಯ ಬಳಸಿದ ದೆಹಲಿಯ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ 1.5 ಕೋಟಿ ರೂ. ದಂಡ ವಿಧಿಸಲಾಗಿದೆ.
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದ್ದು, ಇತ್ತೀಚೆಗೆ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಇಂತಹ ಎಆರ್‌ಟಿ ಚಿಕಿತ್ಸಾಲಯಗಳ ವರ್ತನೆಗೆ ಚಾಟಿ ಬೀಸಲಾಗಿದೆ. ನವಜಾತ ಶಿಶುಗಳ ಡಿಎನ್ಎ ವಿವರ ನೀಡುವುದನ್ನು ಕಡ್ಡಾಯಗೊಳಿಸುವುದರ ಜೊತೆಗೆ ಮಾನ್ಯತೆ ಪರಿಶೀಲಿಸುವಂತೆ ಹೇಳಲಾಗಿದೆ.
2009 ರ ಜೂನ್ ನಲ್ಲಿ ಎಆರ್‌ಟಿ ಪ್ರಕ್ರಿಗೆ ಮೂಲಕ ಮಹಿಳೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪೋಷಕರಿಂದ ಮಗುವಿಗೆ ಸಂಭವನೀಯ ರಕ್ತದ ಗುಂಪುಗಳ ಅನುವಂಶಿಕ ರೀತಿಯಲ್ಲಿ ಶಿಶುಗಳ ರಕ್ತದ ಗುಂಪು ಇಲ್ಲದ ಕಾರಣ ಪಿತೃತ್ವ ಪರೀಕ್ಷೆ, ಡಿಎನ್ಎ ಪ್ರೊಫೈಲ್ ನಡೆಸಲಾಗಿದೆ. ಅದರಲ್ಲಿ ಪತಿ ಅವಳಿ ಮಕ್ಕಳ ಜೈವಿಕ ತಂದೆ ಅಲ್ಲ ಎನ್ನುವುದು ಗೊತ್ತಾಗಿದೆ.
ಇದರಿಂದ ಆಘಾತಕ್ಕೊಳಗಾದ ದಂಪತಿ ಭಾವನಾತ್ಮಕ ಒತ್ತಡ, ಕೌಟುಂಬಿಕ ಭಿನ್ನಾಭಿಪ್ರಾಯ, ಅನುವಂಶಿಕವಾಗಿ ಬರುವ ಕಾಯಿಲೆಗಳ ಭಯ ಮೊದಲಾದ ಸಮಸ್ಯೆಗಳನ್ನು ಈ ಪ್ರಕರಣ ಸೃಷ್ಟಿಸಿರುವುದರಿಂದ ನಿರ್ಲಕ್ಷ ಧೋರಣೆ ತೋರಿದ ಆಸ್ಪತ್ರೆಯಿಂದ ಪರಿಹಾರವಾಗಿ ಎರಡು ಕೋಟಿ ರೂಪಾಯಿ ಕೊಡಿಸುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಆಯೋಗದ ಸದಸ್ಯ ಎಸ್.ಎಂ. ಕಾಂತಿಕರ್ ಅವರು ಆದೇಶ ನೀಡಿ, ರಕ್ತದ ಗುಂಪಿನ ವರದಿ ಮತ್ತು ಡಿಎನ್‌ಎ ಪ್ರೊಫೈಲ್ ಪತಿ ಶಿಶುಗಳ ಜೈವಿಕ ತಂದೆಯಲ್ಲ ಎಂದು ಸ್ಪಷ್ಟವಾಗಿ ಸಾಬೀತುಪಡಿಸಿದೆ. ಹೆಣ್ಣು ಅವಳಿಗಳ ಕುಟುಂಬದ ವಂಶಾವಳಿಯನ್ನು ಬದಲಾಯಿಸಲಾಗದಂತೆ ಬದಲಾವಣೆ ಮಾಡಲಾಗಿದೆ. ಭವಿಷ್ಯದಲ್ಲಿ ಇದು ತೊಂದರೆಗೆ ಕಾರಣವಾಗಬಹುದು ಎಂದು ಆಯೋಗ ಹೇಳಿದೆ.
ಆಸ್ಪತ್ರೆ ಮತ್ತು ಅದರ ನಿರ್ದೇಶಕ, ಅಧ್ಯಕ್ಷ, ವೈದ್ಯರು ನಿರ್ಲಕ್ಷ ತೋರಿ ಅನ್ಯಾಯದ ವ್ಯಾಪಾರ ಅಭ್ಯಾಸಗಳಿಗೆ ಹೊಣೆಗಾರರಾಗಿದ್ದಾರೆ. ಅವರು 1.5 ಕೋಟಿ ರೂ ಕೊಟ್ಟುಮಟ್ಟದ ದಂಡವನ್ನು ಪಾವತಿಸಬೇಕೆಂದು ಆದೇಶ ನೀಡಲಾಗಿದೆ.