ನವದೆಹಲಿ: ಮೀಸಲಾತಿ ಉದ್ದೇಶದಿಂದ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿ ಎಂದು ವರ್ಗೀಕರಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(NCBC) ತೀವ್ರವಾಗಿ ಟೀಕಿಸಿದೆ.
ಕರ್ನಾಟಕ ಸರ್ಕಾರದ ಈ ನಿರ್ಧಾರ ಸಾಮಾಜಿಕ ನ್ಯಾಯ ಕುರಿತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆಯೋಗ ಹೇಳಿದೆ. ಮುಸ್ಲಿಂ ಧರ್ಮದೊಳಗಿನ ಎಲ್ಲ ಜಾತಿಗಳು ಮತ್ತು ಸಮುದಾಯಗಳನ್ನು ಹಿಂದುಳಿದ ವರ್ಗಗಳ ರಾಜ್ಯ ಪಟ್ಟಿಯಲ್ಲಿ ವರ್ಗ 2ಎ ಅಡಿಯಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಾಗಿ ಸೇರ್ಪಡೆ ಮಾಡಲಾಗಿದೆ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದತ್ತಾಂಶ ತಿಳಿಸಿದೆ.
ಕಳೆದ ವರ್ಷ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿ ಮೀಸಲಾತಿ ಕುರಿತ ಕರ್ನಾಟಕ ಸರ್ಕಾರದ ಮೀಸಲಾತಿ ನೀತಿಯನ್ನು ಪರಿಶೀಲಿಸಿತ್ತು. ಮುಸ್ಲಿಂ ಧರ್ಮದೊಳಗಿನ ಎಲ್ಲ ಜಾತಿಗಳು ಮತ್ತು ಸಮುದಾಯಗಳನ್ನು ಹಿಂದುಳಿದ ವರ್ಗಗಳ ರಾಜ್ಯ ಪಟ್ಟಿ ಅಡಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಾಗಿ ಸೇರ್ಪಡೆ ಮಾಡುವುದರಿಂದ ವಾಸ್ತವದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಜಾತಿ ಮತ್ತು ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇಂತಹ ಮೀಸಲಾತಿ ನೀತಿ ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ಕ್ರಮಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆ ತತ್ವಗಳನ್ನು ದುರ್ಬಲಗೊಳಿಸುತ್ತವೆ ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಹೇಳಿದೆ.