ಶಿವಮೊಗ್ಗ: ದಶಕದ ಹಿಂದೆ 2010 ರಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾಗಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡಿನ ತಿರುಪತ್ತೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ಇತ್ತೀಚೆಗೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದರು. ಬಿ.ಜಿ. ಕೃಷ್ಣಮೂರ್ತಿ ಪತ್ನಿ ಎನ್ನಲಾದ ಹೊಸಗದ್ದೆ ಪ್ರಭಾ 2010ರಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು.
ಆರೋಗ್ಯ ಸಮಸ್ಯೆ ಮತ್ತು ಬಿ.ಜಿ. ಕೃಷ್ಣಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರಿಂದ ತಮಿಳುನಾಡು ಪೊಲೀಸರ ಮುಂದೆ ಪ್ರಭಾ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.
ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ಕೌಂಟರ್ ನಲ್ಲಿ ಮೃತಪಟ್ಟ ನಂತರ ಮಲೆನಾಡಿನಲ್ಲಿ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದ್ದರಿಂದ ಬಿ.ಜಿ. ಕೃಷ್ಣಮೂರ್ತಿ ಮತ್ತು ಹೊಸಗದ್ದೆ ಪ್ರಭಾ ಸೇರಿದಂತೆ ಪ್ರಮುಖರು ಕೇರಳಕ್ಕೆ ತೆರಳಿ ಭೂಗತರಾಗಿದ್ದರು.
ಇತ್ತೀಚೆಗೆ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಬಂಧಿಸಿದ ನಂತರ ಅನಾರೋಗ್ಯ ಸಮಸ್ಯೆ ಕಾಡಿದ್ದರಿಂದ ಹೊಸಗದ್ದೆ ಪ್ರಭಾ ತಿರುಪತ್ತೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ಇದರೊಂದಿಗೆ ಸುಮಾರು ಎರಡು ದಶಕಗಳ ಕಾಲ ನಡೆದ ಮಲೆನಾಡಿನ ನಕ್ಸಲ್ ಚಟುವಟಿಕೆ ಬಹುತೇಕ ಅಂತ್ಯವಾಗಿದೆ ಎನ್ನಲಾಗಿದೆ.
ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪದ ಹೊಸಗದ್ದೆಯ ಪ್ರಭಾ ಅನೇಕ ಹೆಸರುಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು. ಆಗುಂಬೆ ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ ಪ್ರಭಾ ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ನಂತರ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡು ಭೂಗತರಾಗಿದ್ದರು.