ಕಾಸರಗೋಡು: ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತೇರಿ ಕಲ್ಲಡ್ಡ ಬಳಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಪ್ರಮುಖ ನಕ್ಸಲರನ್ನು ಕೇರಳ ಪೊಲೀಸರು, ಕರ್ನಾಟಕ ನಕ್ಸಲ್ ನಿಗ್ರಹ ದಳ ಬಂಧಿಸಿದೆ.
ಸಿಪಿಐ ಮಾವೋವಾದಿಗಳ ಮುಖಂಡ ಶೃಂಗೇರಿಯ ಬಿ.ಜಿ. ಕೃಷ್ಣಮೂರ್ತಿ(48) ಹಾಗೂ ಕಳಸ ಮೂಲದ ಸಾವಿತ್ರಿ(36) ಬಂಧಿತರು. 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಿ.ಜಿ. ಕೃಷ್ಣಮೂರ್ತಿ ಕೇರಳದಲ್ಲಿಯೂ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ.
ಕರ್ನಾಟಕದಲ್ಲಿ 53 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬಿ.ಜಿ. ಕೃಷ್ಣಮೂರ್ತಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕರಾಗಿದ್ದರು. ಶೃಂಗೇರಿ ತಾಲೂಕು ಬುಕ್ಕಡಿಬೈಲು ಗ್ರಾಮದ ಕೃಷ್ಣಮೂರ್ತಿಗೆ ಮೂಲತಃ ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದು, ವಕೀಲ ವೃತ್ತಿಗೆ ಮಾಡುತ್ತಿದ್ದರು. ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಶಸ್ತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಮಲೆನಾಡಿನ ನಕ್ಸಲ್ ಚಟುವಟಿಕೆಗಳಲ್ಲಿ ಅವರ ಹೆಸರು ಮುಂಚೂಣಿಯಲ್ಲಿತ್ತು. 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ಕೌಂಟರ್ ನಲ್ಲಿ ಮೃತಪಟ್ಟ ನಂತರ ಬಿ.ಜಿ. ಕೃಷ್ಣಮೂರ್ತಿ ನೇತೃತ್ವ ವಹಿಸಿದ್ದರು ಎನ್ನಲಾಗಿದೆ.