ಚಿಕ್ಕಮಗಳೂರು: ಕೇರಳದ ವಯನಾಡು ಜಿಲ್ಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆಯ ಶ್ರೀಮತಿ ಅಲಿಯಾಸ್ ಉನ್ನಿಮಾಯಾ ಅವರನ್ನು ಬಂಧಿಸಲಾಗಿದೆ.
ವಯನಾಡು ಜಿಲ್ಲೆಯ ಮನಂತವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ನಾಲ್ವರು ನಕ್ಸಲರು ರಾತ್ರಿ ಊಟಕ್ಕೆ ತೆರಳಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ಶರಣಾಗತಿಗೆ ಸೂಚನೆ ನೀಡಲಾಗಿದ್ದು, ಈ ವೇಳೆ ನಕ್ಸಲರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ.
ಘಟನೆ ವೇಳೆ ಇಬ್ಬರು ನಕ್ಸಲರು ಪರಾರಿಯಾಗಿದ್ದು, ಕೇರಳ ಮೂಲದ ನಕ್ಸಲ್ ಮುಖಂಡ ಚಂದ್ರು ಅಲಿಯಾಸ್ ತಿರುವೆಂದಿಗಂ ಹಾಗೂ ಶ್ರೀಮತಿ ಸೆರೆ ಸಿಕ್ಕಿದ್ದಾರೆ. ಬಂಧಿತರಿಂದ ಪಿಸ್ತೂಲ್ ಮತ್ತು ನಾಡ ಬಂದೂಕು ವಶಕ್ಕೆ ಪಡೆಯಲಾಗಿದ್ದು, ಪೆರಿಯಾ ಅರಣ್ಯ ಪ್ರದೇಶದಲ್ಲಿ ಪರಾರಿಯಾದ ಇಬ್ಬರು ನಕ್ಸಲರಾಗಿ ಹುಡುಕಾಟ ನಡೆಸಲಾಗಿದೆ.
ಶೃಂಗೇರಿ ತಾಲೂಕು ಬೇಗಾರ್ ಗ್ರಾಮ ಪಂಚಾಯಿತಿಯ ಬೆಳಗೋಡುಕೊಡಿಗೆಯ ಪುಟ್ಟುಗೌಡ, ಗಿರಿಜಾ ದಂಪತಿ ಪುತ್ರಿಯಾದ ಶ್ರೀಮತಿ 2007ರಿಂದ ನಾಪತ್ತೆಯಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. 2009ರ ತನಿಕೋಡು ಚೆಕ್ಪೋಸ್ಟ್ ಅರಣ್ಯ ಇಲಾಖೆ ತಪಾಸಣೆ ಕೊಠಡಿ ಧ್ವಂಸ, ಮಾತೊಳ್ಳಿಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಶ್ರೀಮತಿ ಭಾಗಿಯಾಗಿದ್ದ ಆರೋಪವಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಶ್ರೀಮತಿ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ ಎನ್ನಲಾಗಿದೆ.