ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಗೆ ಭೂಗತ ಲೋಕದ ಸಂಪರ್ಕವಿದೆ ಎಂದು ಆರೋಪಿಸಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಆರೋಪಕ್ಕೆ ತಿರುಗೇಟು ನೀಡಿರುವ ನವಾಬ್ ಮಲ್ಲಿಕ್, ನಾನು ಕೂಡ ಫಡ್ನವಿಸ್ ವಿರುದ್ಧ ಹೈಡ್ರೋಜನ್ ಬಾಂಬ್ ಸ್ಫೋಟಿಸುತ್ತೇನೆ ಎಂದಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ್ದ ಫಡ್ನವಿಸ್, ನವಾಬ್ ಮಲ್ಲಿಕ್ ಗೆ ಭೂಗತ ಜಗತ್ತಿನ ನಂಟಿದೆ ಎಂದು ಆರೋಪಿಸಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಸ್ತುತ ಪಡಿಸಿದ್ದರು. 1993ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ಇಬ್ಬರು ಆರೋಪಿಗಳ ಜೊತೆ ನವಾಬ್ ಮಲ್ಲಿಕ್ ಆಸ್ತಿ ವ್ಯವಹಾರ ನಡೆಸಿದ್ದಾರೆ. ಆರೋಪಿಗಳಾದ ಸಲೀಂ ಪಟೇಲ್ ಹಾಗೂ ಸರ್ದಾರ್ ಶಹಾಬ್ ಅಲಿ ಖಾನ್ ಅವರಿಂದ ಕುರ್ಲಾದಲ್ಲಿ ಆಸ್ತಿ ಖರೀದಿಸಿದ್ದಾರೆ ಅದಕ್ಕೆ ಗೌವಾಲಾ ಕಾಂಪೌಂಡ್ ಎಂದು ಹೆಸರಿಡಲಾಗಿದೆ.
30 ಲಕ್ಷದ ಆಸ್ತಿಯನ್ನು 20 ಲಕ್ಷಕ್ಕೆ ಖರೀದಿಸಲಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ನವಾಬ್ ಮಲ್ಲಿಕ್ ಪುತ್ರ ಕೂಡ ಇದ್ದಾರೆ. ಸಲೀಂ ಪಟೇಲ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಾಯಕನಾಗಿದ್ದಾನೆ. ದಾವೂದ್ ಸಹೋದರಿ ಹಸೀನಾ ಕಾರಿನ ಡ್ರೈವರ್ ಆಗಿದ್ದ. ಈತ ಕೂಡ ಭೂಗತ ಜಗತ್ತಿನಲ್ಲಿ ಇದ್ದವನಾಗಿದ್ದ. ಸಲೀಂ ಹಾಗೂ ಹಸೀನಾ ಇಬ್ಬರೂ ಭೂ ಮಾಫಿಯಾ ನಡೆಸುತ್ತಿದ್ದರು ಎಂದು ಹೇಳಿದ್ದರು.
ಇದೀಗ ಫಡ್ನವಿಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ನವಾಬ್ ಮಲ್ಲಿಕ್, ದೇವೇಂದ್ರ ಫಡ್ನವಿಸ್ ಗೆ ಕೂಡ ಭೂಗತ ಜಗತ್ತಿನ ನಂಟಿದೆ ಎಂಬುದನ್ನು ನಾನು ಸಾಬೀತು ಮಾಡುತ್ತೇನೆ. ಈ ಸಂಬಂಧ ಹೈಡ್ರೋಜನ್ ಬಾಂಬ್ ಸ್ಫೋಟಿಸುತ್ತೇನೆ ಎಂದಿದ್ದಾರೆ.