ನವರಾತ್ರಿಯ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ವೇಳೆ ಹಲವಾರು ದೇವಾಲಯಗಳನ್ನು ಹೂವಿನಿಂದ ಅಲಂಕರಿಸಿರುವುದನ್ನು ಕಾಣಬಹುದು. ವಿಶಾಖಪಟ್ಟಣಂನ ಕುರುಪಮ್ ಮಾರ್ಕೆಟ್‌ನಲ್ಲಿರುವ 146 ವರ್ಷಗಳಷ್ಟು ಹಳೆಯದಾದ ಕನ್ಯಕಾ ಪರಮೇಶ್ವರಿ ಅಮ್ಮಾವರಿ ದೇವಸ್ಥಾನವನ್ನು ಹಣ, ಚಿನ್ನದಿಂದ ಅಲಕರಿಸಲಾಗಿದೆ.
ಕೋಟ್ಯಂತರ ಮೌಲ್ಯದ ಕರೆನ್ಸಿ ನೋಟುಗಳು ಮತ್ತು ಚಿನ್ನಾಭರಣಗಳಿಂದ ದೇವಾಲಯವನ್ನು ಅಲಂಕರಿಸಲಾಗಿದೆ. ದೇವಾಲಯದ ಅಲಂಕರಣಕ್ಕೆ ಮತ್ತು ವಿಶೇಷವಾಗಿ ಕನ್ಯಕಾ ಪರಮೇಶ್ವರಿ ದೇವಿಯ ವಿಗ್ರಹಕ್ಕೆ ಬಳಸಲಾದ ಕರೆನ್ಸಿ ಒಟ್ಟು 2 ಕೋಟಿ ರೂಪಾಯಿ ಎಂದು ದೇವಾಲಯದ ಆಡಳಿತಾಧಿಕಾರಿಗಳು ಹೇಳಿದ್ದಾರೆ.
ಈ ದೇವಾಲಯದಲ್ಲಿ 10 ದಿನಗಳ ನವರಾತ್ರಿ ಉತ್ಸವದಲ್ಲಿ, ದೇವಿಯ ಅನೇಕ ಅವತಾರಗಳನ್ನು ಪೂಜಿಸಲಾಗುತ್ತದೆ. ಬೆಳಗಿನ ಜಾವ ವಿಶೇಷ ಅಭಿಷೇಕ ನಡೆಸಿ ಹಾಲು, ಮೊಸರು, ಶ್ರೀಗಂಧ, ಜೇನು ಮತ್ತು ಕೆಲವು ಹಣ್ಣಿನ ರಸಗಳು ಸೇರಿದಂತೆ 18 ವಿಧದ ದ್ರವಗಳನ್ನು ಬಳಸಿ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಿಯನ್ನು ಆಭರಣಗಳು ಮತ್ತು 108 ಚಿನ್ನದ ಹೂವುಗಳಿಂದ ಅಲಂಕರಿಸಲಾಯಿತು. ಅಲಂಕಾರಕ್ಕಾಗಿ ಸುಮಾರು ಆರು ಕೆಜಿ ಚಿನ್ನಾಭರಣಗಳು, ಚಿನ್ನದ ಸೀರೆ, ಚಿನ್ನದ ಬಿಸ್ಕತ್ತುಗಳು, ಆರು ಕೆಜಿ ಬೆಳ್ಳಿ ವಸ್ತುಗಳು, ಬೆಳ್ಳಿ ಬಿಸ್ಕತ್ತುಗಳು ಮತ್ತು ಎರಡು ಕೋಟಿ ಭಾರತೀಯ ಕರೆನ್ಸಿಯನ್ನು ಬಳಸಲಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಮಾತನಾಡಿ, ಕಳೆದ 20 ವರ್ಷಗಳಿಂದ ನವರಾತ್ರಿ ಉತ್ಸವದಲ್ಲಿ ದೇವಿಗೆ ನೋಟುಗಳು ಮತ್ತು ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗಿದೆ. ಪೂಜೆಗಾಗಿ ಅಮ್ಮನವರ(ದೇವತೆ) ಮುಂದೆ ಕರೆನ್ಸಿ ಮತ್ತು ಚಿನ್ನವನ್ನು ಇಡುವುದು ಅದೃಷ್ಟ ಎಂದು ಜನ ನಂಬುತ್ತಾರೆ ಎಂದು ಹೇಳಿದ್ದಾರೆ.
ಇದೆಲ್ಲವೂ ಸಾರ್ವಜನಿಕ ಕೊಡುಗೆಯಾಗಿದೆ. ದೇವಾಲಯದ ಸಂಪ್ರದಾಯದಂತೆ ದೇವಿಯ ವಿಗ್ರಹವನ್ನು ನವರಾತ್ರಿ ಉತ್ಸವದಲ್ಲಿ ಚಿನ್ನದ ಆಭರಣಗಳು ಮತ್ತು ವಿವಿಧ ಮುಖಬೆಲೆಯ ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗುತ್ತದೆ.