ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಆಪ್ತ ಸಲಹೆಗಾರ ಮೊಹಮ್ಮದ್ ಮುಸ್ತಫಾ ವಿರುದ್ಧ ಭಾನುವಾರ ಪೊಲೀಸ್ ಪ್ರಕರಣ ದಾಖಲಾಗಿದೆ. ಮುಸ್ಲಿಂ ಪ್ರಾಬಲ್ಯ ಕ್ಷೇತ್ರವಾದ ಮಲೇರ್‌ಕೋಟ್ಲಾದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಮುಸ್ತಾಫ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮುಸ್ತಾಫ ಪಂಜಾಬ್ ನ ಮಾಜಿ ಪೊಲೀಸ್ ಮಹಾನಿರ್ದೇಶಕನಾಗಿದ್ದರು. ಆತನ ಪತ್ನಿ ರಜಿಯಾ ಸುಲ್ತಾನಾ 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ. ಮಾಜಿ ಡಿಜಿಪಿ ವಿರುದ್ಧ ಮುಸ್ಲಿಂ ಹಾಗೂ ಹಿಂದೂ ಸಮುದಾಯಗಳ ನಡುವೆ ದ್ವೇಷ ಬೆಳೆಸಿದ ಆರೋಪದಡಿ ಈ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಸ್ತಫಾ, ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುತ್ತಿರುವಂತೆ ನಾನು ಹಿಂದೂಗಳನ್ನು ಗುರಿಯಾಗಿಸಿಕೊಂಡಿಲ್ಲ. ನಾನು ಫಿಟ್ನೆ ಎಂಬ ಪದವನ್ನು ಬಳಸಿದ್ದೇನೆ, ಅದರರ್ಥ ಕಾನೂನು ಉಲ್ಲಂಘಿಸಿದವರು ಎಂದು. ನನ್ನ ಮೇಲೆ ಹಲ್ಲೆಗೆ ಯತ್ನಿಸಿದ ಮುಸ್ಲಿಮರ ಗುಂಪಿನ ಮೇಲೆ ಕೋಪಗೊಂಡು ಅವರಿಗೆ ಎಚ್ಚರಿಕೆ ನೀಡುತ್ತಿದ್ದೆ ಹೊರತು ಹಿಂದೂಗಳಿಗಲ್ಲ ಎಂದಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮುಸ್ತಾಫ ಜನವರಿ 20ರಂದು ನಡೆಯಲಿರುವ ತನ್ನ ಕಾರ್ಯಕ್ರಮದ ಬಳಿ ಯಾರಾದರೂ ಹಿಂದೂಗಳು ಕಾರ್ಯಕ್ರಮ ಏರ್ಪಡಿಸಿದರೆ ಭೀಕರ ಪರಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಮುಸ್ತಫಾ ವಿರುದ್ಧ ಸ್ಥಳೀಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಮೀಲ್-ಉರ್-ರೆಹಮಾನ್ ಅವರು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಮುಸ್ತಾಫ, ಎಎಪಿ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳನ್ನು ಥಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರೆಹಮಾನ್ ಆರೋಪಿಸಿದ್ದಾರೆ.
ಇತ್ತ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮುಸ್ತಫಾ ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮನುಷ್ಯ (ಮುಸ್ತಫಾ) ಕಂಬಿಯ ಹಿಂದೆ ಇರಬೇಕು. ನಾನು ವೀಡಿಯೋವನ್ನು ನೋಡಿದ್ದೇನೆ. ಆತ ಪಂಜಾಬ್ ಶಾಂತಿ ಕದಡಲು ಯತ್ನಿಸುತ್ತಿದ್ದಾನೆ ಎಂದು ಸಿಂಗ್ ಹೇಳಿದ್ದಾರೆ.