ಅಮೃತಸರ: ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ಪತ್ನಿ ಮನೆ ಮದ್ದು ಸೇವಿಸಿ ಗುಣಮುಖರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಹೇಳಿಕೊಂಡಿದ್ದು, ಅವರಿಗೆ ಮುಳುವಾಗಿ ಪರಿಣಮಿಸಿದೆ.
ತಮ್ಮ ಹೇಳಿಕೆಗೆ ಪೂರಕ ವೈಜ್ಞಾನಿಕ ಪುರಾವೆಗಳನ್ನು ಸಲ್ಲಿಸಲು ಛತ್ತೀಸ್ ಗಢದ ನಾಗರಿಕ ಸಮಾಜ ಲೀಗಲ್ ನೋಟಿಸ್ ಜಾರಿ ಮಾಡಿದೆ. ಸಿಧು ಅವರ ಪತ್ನಿಗೆ 850 ಕೋಟಿ ರೂಪಾಯಿ ಪರಿಹಾರ ಕೋರಿ ಲೀಗಲ್ ನೋಟಿಸ್ ಕಳುಹಿಸಿದೆ.
ಸಿಧು ಅವರು ತಮ್ಮ ಹೇಳಿಕೆಗೆ ಬಹಿರಂಗ ಕ್ಷಮೆ ಯಾಚಿಸಬೇಕು. ತಮ್ಮ ಹೇಳಿಕೆಗೆ ವಾರದೊಳಗೆ ಪೂರಕ ವೈಜ್ಞಾನಿಕ ಪುರಾವೆಗಳನ್ನು ಸಲ್ಲಿಸಬೇಕು. ವಿಫಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ತಮ್ಮ ಪತ್ನಿಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ಈ ವೇಳೆ ಮನೆ ಮದ್ದು ಸೇವಿಸಿ ಅವರು ಗುಣಮುಖರಾಗಿದ್ದಾರೆ ಎಂದು ಸಂದರ್ಶನವೊಂದರಲ್ಲಿ ನವಜೋತ್ ಸಿಂಗ್ ಸಿಧು ಹೇಳಿಕೊಂಡಿದ್ದರು. ಬೇವು, ಅರಿಶಿಣ, ನಿಂಬೆ, ನೀರು, ಬೀಟ್ರೂಟ್ ನಿಂದ ತಯಾರಿಸಿದ ಮನೆಮದ್ದು ಸೇವಿಸಿ ಪತ್ನಿ ಗುಣಮುಖರಾಗಿದ್ದಾರೆ ಎಂದಿದ್ದರು. ಅವರ ಈ ಹೇಳಿಕೆಗೆ ವೈದ್ಯರು ಹಾಗೂ ಕ್ಯಾನ್ಸರ್ ತಜ್ಞರು ಅಸಮಾಧಾನ ವ್ಯಕ್ತಪಡಿಸಿ ಯಾವುದೇ ಪುರಾವೆ ಇಲ್ಲದ ಇಂತಹ ಹೇಳಿಕೆ ಒಪ್ಪುವುದಿಲ್ಲವೆಂದು ಹೇಳಿದ್ದರು.
ಇದೀಗ ಛತ್ತೀಸ್ ಗಢದ ನಾಗರಿಕ ಸಮಾಜದ ಸಂಚಾಲಕ ಡಾ. ಕುಲದೀಪ್ ಸೋಲಂಕಿ ಅವರು, ಸಿಧು ದಂಪತಿ ಸುಳ್ಳು ಮಾಹಿತಿ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕ್ಯಾನ್ಸರ್ ಕುರಿತು ಪ್ರಸ್ತುತ ಇರುವ ಚಿಕಿತ್ಸೆಗಳ ಬಗ್ಗೆ ನಕಾರಾತ್ಮಕ ಮನೋಭಾವ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಅವರು ಹೇಳುವ ಮನೆಮದ್ದು ಸೇವಿಸುವುದರಿಂದ ಸಾವಿಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ ಎಂದು ಹೇಳಿದ್ದು, 850 ಕೋಟಿ ರೂಪಾಯಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ.