ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ವಿರೋಧಿಗಳಲ್ಲಿ ಒಬ್ಬರಾದ ನವಜೋತ್ ಸಿಂಗ್ ಸಿಧುರನ್ನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಮುಂದಾಗಿದೆ. ಈ ಮೂಲಕ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಲು ಎಐಸಿಸಿ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಆದರೆ ಹೈಕಮಾಂಡ್ ನಿರ್ಧಾರದಿಂದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನ ಈಗಾಗಲೇ ಪಕ್ಷದ ವರಿಷ್ಠರಿಗೆ ರವಾನಿಸಿರುವ ಅಮರೀಂದರ್ ಸಿಂಗ್, ಸಿಧು ಪಕ್ಷದ ಅಧ್ಯಕ್ಷರಾದರೆ ತಾವು ಮುಂದಿನ ವಿಧಾನಸಭಾ ಚುನಾವಣೆ ಎದುರಿಸೋದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆದರೆ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಹಾಗೂ ಸಿಎಂ ಅಮರೀಂದರ್ ಸಿಂಗ್ ನಿರಾಕರಿಸಿದ್ದಾರೆ. ಆದರೆ ಪಂಜಾಬ್ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಪೋಟಗೊಂಡಿದೆ ಎಂಬ ವಿಚಾರ ಮಾತ್ರ ಗುಟ್ಟಾಗಿ ಉಳಿದಿಲ್ಲ.
ರಾವತ್ ನಿನ್ನ ಸಂಜೆ 7.30ರ ಸುಮಾರಿಗೆ ಸೋನಿಯಾ ಗಾಂಧಿಯವರನ್ನ ಭೇಟಿಯಾಗಲು ಧಾವಿಸಿದ್ದಾರೆ . ಮಾತ್ರವಲ್ಲದೇ ತಾವು ಸಿಧು ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎಂಬ ವಿಚಾರವನ್ನ ಎಲ್ಲಿಯೂ ಹೇಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ರಾವತ್ ಕಚೇರಿಯಲ್ಲಿ ಈಗಾಗಲೇ ಸಿಧು ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಬಗ್ಗೆ ಘೋಷಣೆ ಪ್ರಕಟಿಸಲು ಅಗತ್ಯ ತಯಾರಿಯನ್ನೂ ಮಾಡಲಾಗ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ರವೀನ್ ಟುಕ್ರಾಲ್, ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಯು ಸತ್ಯಕ್ಕೆ ದೂರವಾಗಿದೆ. ಅವರು ತಮ್ಮ ಸ್ಥಾನವನ್ನ ತ್ಯಜಿಸುತ್ತಿಲ್ಲ ಹಾಗೂ ಅವರಿಗೆ ತ್ಯಜಿಸುವಂತೆ ಯಾರು ಸಹ ಸೂಚನೆ ನೀಡಿಲ್ಲ. 2017ರಲ್ಲಿ ಚುನಾವಣೆಯನ್ನ ಮುನ್ನಡೆಸಿದಂತೆ 2022 ಪಂಜಾಬ್ ವಿಧಾನಸಭಾ ಚುನಾವಣೆಯ ಮುಂದಾಳತ್ವ ಕೂಡ ಅವರೇ ಹೊರಲಿದ್ದಾರೆ. ಮಾಧ್ಯಮಗಳು ತಪ್ಪು ಮಾಹಿತಿಯನ್ನು ಹರಡೋದನ್ನ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ನಡುವೆ ಅಮರೀಂದರ್ ಪರ ವಕ್ತಾರ ಕೂಡ ಈ ವಿಚಾರವಾಗಿ ಮಾತನಾಡಿದ್ದು ಸಿಧು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಆದರೆ ನಿಜಕ್ಕೂ ತಮಗೆ ಬೇಸರವಾಗಲಿದೆ ಎಂದು ಅಮರೀಂದರ್ ಈಗಾಗಲೇ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಒಂದು ವೇಳೆ ಈ ಬಗ್ಗೆ ಹೈಕಮಾಂಡ್ ಅಧಿಕೃತ ಘೋಷಣೆ ಮಾಡಿದಲ್ಲಿ ಇದೊಂದು ವಿನಾಶಕಾರಿ ಹೆಜ್ಜೆಯಾಗಲಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.