ಮುಂಬೈ: ಕಸ ಸಂಗ್ರಹಣೆ ಸಂದರ್ಭದಲ್ಲಿ ದೊರಕಿದ್ದ ಬಂಗಾರ, ಹಣ, ಮೊಬೈಲ್ ಅನ್ನು ಮಾಲೀಕರಿಗೆ ತಲುಪಿಸುವ ಮೂಲಕ ಈ ಯುವಕರು ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಘಟನೆ ನವಿ ಮುಂಬೈನಲ್ಲಿ ನಡೆದಿದ್ದು, ಕಸ ಸಂಗ್ರಹಣೆ ವೇಳೆ ದೊರೆತಿದ್ದ ಬಂಗಾರದ ಮಾಂಗಲ್ಯ ಸರ, ಹಣ ಮತ್ತು ಮೊಬೈಲ್ ಇರುವ ಬ್ಯಾಗ್ ಅನ್ನು ಪೊಲೀಸರ ಮೂಲಕ ಮಾಲೀಕರಿಗೆ ತಲುಪಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಮೀನು ಮಾರಾಟಗಾರರಾದ ಸುಶಾಲಿ ಧನಂಜಯ್ ನಖ್ವಾ ಅವರ ಮಗಳು ವಿಧಿ ಧನಂಜಯ ನಕ್ವಾ (10) ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹಣದ ಅವಶ್ಯಕತೆ ಇದ್ದ ಕಾರಣ ಆಕೆಯ ತಂದೆ ಚಿಕಿತ್ಸೆಗಾಗಿ ಹಣ ತರಲು ಕಪ್ಪು ಬಣ್ಣದ ಚೀಲದಲ್ಲಿ ಸುಮಾರು 35 ಗ್ರಾಂನ ಮಂಗಳ ಸೂತ್ರವನ್ನು ಮಾರಾಟ ಮಾಡಲು ಆಭರಣ ಅಂಗಡಿಗೆ ತೆಗೆದುಕೊಂಡು ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಆದರೆ ಅವರಿಗೆ ಅರಿವಿಲ್ಲದೇ ಬ್ಯಾಗ್ ರಸ್ತೆಯಲ್ಲಿ ಬಿದ್ದಿದೆ.
ಅಬ್ಬಬ್ಬಾ….! 29 ನಿಮಿಷ ವೃಶ್ಚಿಕಾಸನ ಮಾಡಿ ಗಿನ್ನೆಸ್ ದಾಖಲೆ ಮಾಡಿದ ಯಶ್
ಬೋರಿ ಪಖಾಡಿಯ ನಿವಾಸಿಗಳಾದ ಅಶ್ರಫ್ ಅಸ್ಗರ್ ಶೇಖ್ (18) ಮತ್ತು ಅಮಿತ್ ಲಾಲ್ಜಿ ಚೌಧರಿ (23) ಇಬ್ಬರೂ ಕಸದಲ್ಲಿ ಬಳಸಬಹುದಾದ ವಸ್ತುಗಳನ್ನು ಸಂಗ್ರಹಿಸುವಾಗ ಆನಂದಿ ಹೋಟೆಲ್ ಬಳಿ ರಸ್ತೆಯ ಪಕ್ಕದಲ್ಲಿ ಚೀಲ ದೊರೆತಿದೆ. ಬ್ಯಾಗ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳುವ ಬದಲು ಮೂಲ ಮಾಲೀಕರಿಗೆ ಬ್ಯಾಗ್ ಹಿಂತಿರುಗಿಸುವಂತೆ ಊರನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಆ ಬ್ಯಾಗ್ ಅನ್ನು ನೀಡಿದ್ದಾರೆ.
ನಂತರ ಬ್ಯಾಗ್ ನಲ್ಲಿದ್ದ ಮೊಬೈಲ್ ಸಹಾಯದಿಂದ ಮೂಲ ಮಾಲೀಕರನ್ನು ಪತ್ತೆ ಹಚ್ಚಿದ ಪೊಲೀಸರು, ಮಾಲೀಕರನ್ನು ಠಾಣೆಗೆ ಬರುವಂತೆ ಹೇಳಿ ಆ ಬ್ಯಾಗ್ ಅನ್ನು ತಲುಪಿಸಿದ್ದಾರೆ. ತದನಂತರ ಹಣಕ್ಕೆ, ಬಂಗಾರಕ್ಕೆ ದುರಾಸೆ ತೋರದೆ ಬ್ಯಾಗ್ ತಂದುಕೊಟ್ಟ ಅವರಿಬ್ಬರನ್ನು ಪೊಲೀಸರು ಅಭಿನಂದಿಸಿ ಸೂಕ್ತ ಬಹುಮಾನ ನೀಡಿದ್ದಾರೆ.