ಸ್ಯಾಂಡಲ್ ವುಡ್ ನ ಖ್ಯಾತ ಗಾಯಕ ನವೀನ್ ಸಜ್ಜು ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2013ರಂದು ಬಿಡುಗಡೆಯಾಗಿದ್ದ ಸತೀಶ್ ನೀನಾಸಂ ಅಭಿನಯದ ‘ಲೂಸಿಯಾ’ ಚಿತ್ರದಲ್ಲಿ ‘ಜುಮ್ಮಾ ಜುಮ್ಮಾ’ ಹಾಡಿಗೆ ಧ್ವನಿ ಯಾಗುವ ಮೂಲಕ ತಮ್ಮ ಸಂಗೀತ ಪಯಣ ಆರಂಭಿಸಿದರು. ಮೊದಲ ಹಾಡಿನಲ್ಲೇ ಭರ್ಜರಿ ಯಶಸ್ಸು ಕಂಡ ನವೀನ್ ಸಜ್ಜು ಬಳಿಕ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದು, ದುನಿಯಾ ವಿಜಯ್ ನಟನೆಯ ‘ಕನಕ’ ಚಿತ್ರದ ‘ಎಣ್ಣೆ ನಮ್ದು ಊಟ ನಿಮ್ದು’ ಎಂಬ ಹಾಡಿಗೆ ಧ್ವನಿಯಾದ ಬಳಿಕ ಎಲ್ಲರ ಮನೆ ಮಾತಾದರು.
ಕಾರ್ಯಕ್ರಮ ಒಂದರಲ್ಲಿ ಅಶ್ವಥ್ ಅವರ ‘ಒಳಿತು ಮಾಡು ಮನುಸಾ’ ಹಾಡನ್ನು ಹೇಳಿದ್ದ ನವೀನ್ ಸಜ್ಜು ಧ್ವನಿಗೆ ಗಾನ ಪ್ರಿಯರು ಫಿದಾ ಆಗಿದ್ದರು. ಬಿಗ್ ಬಾಸ್ ಸೀಸನ್ 6ರ ರನ್ನರ್ ಅಪ್ ಕೂಡ ಆಗಿದ್ದ ಇವರು ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಚುಕ್ಕಿ ತಾರೆ’ ದಾರವಾಹಿಯಲ್ಲಿ ಮಲ್ಲಿಕಾರ್ಜುನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ನಟ ನಟಿಯರು ನವೀನ್ ಸಜ್ಜು ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.