alex Certify ನವೀನ್ ಆತ್ಮಕ್ಕೆ ಶಾಂತಿ ಸಿಗಲು ನೀಟ್ ನಿಲ್ಲಲೇಬೇಕು: ಸಾವಿನಿಂದ ಪಾಠ ಕಲಿತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು; ಹೆಚ್.ಡಿ.ಕೆ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವೀನ್ ಆತ್ಮಕ್ಕೆ ಶಾಂತಿ ಸಿಗಲು ನೀಟ್ ನಿಲ್ಲಲೇಬೇಕು: ಸಾವಿನಿಂದ ಪಾಠ ಕಲಿತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು; ಹೆಚ್.ಡಿ.ಕೆ.

ಬೆಂಗಳೂರು: ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಒತ್ತೆ ಇಟ್ಟ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸಗಿದ ಪಾಪಕ್ಕೆ ಮುಗ್ಧ ವಿದ್ಯಾರ್ಥಿ ನವೀನ್ ಬಲಿ ಆಗಿದೆ. ರಾಜಕಾರಣಿಗಳು, ಶ್ರೀಮಂತರಿಗೆ ಉನ್ನತ ಶಿಕ್ಷಣವು ದುಡ್ಡು ಸಂಗ್ರಹ ಮಾಡುವ ಹುಂಡಿಯಾಗಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ದೂರದ ಉಕ್ರೇನ್ ದೇಶದಲ್ಲಿ ಜೀವ ಚೆಲ್ಲಿ ಹುಟ್ಟಿದೂರಿನಲ್ಲಿ ನಿಶ್ಚಲವಾಗಿ ಮಲಗಿದ್ದ ನವೀನ್ ಭಾರತದ ಆತ್ಮಸಾಕ್ಷಿಗೆ ಎದುರಾಗಿರುವ ದೊಡ್ಡ ಪ್ರಶ್ನೆ. ವಿದ್ಯೆ ಹೆಸರಿನಲ್ಲಿ ದಂಧೆ ನಡೆಸುವ ದುರಾಸೆಗೂ ಒಂದು ಸವಾಲು. ಹಾಗಾದರೆ, ಇನ್ನೆಷ್ಟು ನವೀನರು ಬಲಿ ಆಗಬೇಕು ಪ್ರಶ್ನಿಸಿದ್ದಾರೆ.

ಧನದಾಹಕ್ಕೆ ಕಡಿವಾಣ ಹಾಕಿ ಎಲ್ಲರಿಗೂ ಮೆಡಿಕಲ್ ಸೀಟು ಕೊಡಿಸುವ ಉದ್ದೇಶದಿಂದ ಜಾರಿಗೆ ಬಂದ ನೀಟ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ನವೀನ್ ಸಾವಿನಿಂದ ಜ್ಞಾನೋದಯ ಆಗಿದೆ ಎನ್ನುವ ಸಿಎಂ ಬಸವರಾಜ ಬೊಮ್ಮಾಯಿ ಅವರು ವೈದ್ಯ ಶಿಕ್ಷಣ ಶುಲ್ಕ ಕಡಿಮೆ ಮಾಡುವ ಹೇಳಿಕೆ ನೀಡುತ್ತಾರೆ. ಆದರೆ, ನೀಟ್ ವಿರುದ್ಧ ಚಕಾರ ಎತ್ತುತ್ತಿಲ್ಲ, ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಕಾಲೇಜುಗಳಲ್ಲಿ ವೈದ್ಯ ಶಿಕ್ಷಣ ದುಬಾರಿ ಎಂದು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಹಾಗಾದರೆ, ಅಂಥ ಕಾಲೇಜುಗಳಿಗೆ ಶಕ್ತಿ ತುಂಬುತ್ತಿರುವುದು ಏಕೆ? ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ ಕನ್ನಡದ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಟ್ಯೂಷನ್ ಅಂಗಡಿಗಳಿಗೆ ಲಕ್ಷ ಲಕ್ಷ ಕಟ್ಟುವುದು ಬಡ, ಮಧ್ಯಮ ವರ್ಗದ ಮಕ್ಕಳಿಗೆ ಸಾಧ್ಯವಿಲ್ಲ ಎಂದಿದ್ದಾರೆ.

ಮೂತಿಗೆ ತುಪ್ಪ ಸವರುವಂತೆ ವೈದ್ಯ ಶಿಕ್ಷಣದ ಶುಲ್ಕವನ್ನು ಅಲ್ಪಸ್ವಲ್ಪ ಕಡಿಮೆ ಮಾಡಿ ಸದ್ಯಕ್ಕೆ ಪಾರಾಗುವುದಲ್ಲ. ಉಕ್ರೇನ್ ಮತ್ತು ನವೀನ್ ಸಾವಿನಿಂದ ಪಾಠ ಕಲಿತು ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗೂ ನೀಟ್ ನಿಂದ ಹೊರಬರಲು ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನೀಟ್ ಮೂಲಕ ವೈದ್ಯಕೀಯ ಸೀಟು ಸಿಗದೇ ಉಕ್ರೇನ್ ಗೆ ಹೋಗಿ ಉಸಿರು ಚೆಲ್ಲಿದ ನವೀನ್ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀಟ್ ವ್ಯವಸ್ಥೆಗೆ ಚರಮಗೀತೆ ಹಾಡಬೇಕು ಎಂದು ಆಗ್ರಹಿಸಿದ್ದಾರೆ.

ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ಕರುಣಿಸಲಿ. ಪುತ್ರನ ಪಾರ್ಥೀವ ಶರೀರವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿ ಅವರ ಫೋಷಕರು ಸಾರ್ಥಕತೆ ಮೆರೆದಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿ. ನೀಟ್ ನಿಲ್ಲಲೇಬೇಕು. ಅದರ ಕಾರಣಕ್ಕೆ ಬಡಮಕ್ಕಳ ಉಸಿರು ಚೆಲ್ಲುವುದು ನಿಲ್ಲಬೇಕು. ಸರ್ಕಾರ ಮಾತುಗಳ ಮೂಲಕ ಮಕ್ಕಳನ್ನು ಮರಳು ಮಾಡುವುದು ಬೇಡ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...