ಹಾವೇರಿ: ಉಕ್ರೇನ್ ನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ಸ್ವಗ್ರಾಮ ಹಾವೇರಿ ಜಿಲ್ಲೆಯ ಚಳಗೇರಿಗೆ ತರಲಾಗಿದೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನದ ನಂತರ ಚಳಗೇರಿ ಬಸ್ ನಿಲ್ದಾಣದವರೆಗೆ ಅಂತಿಮಯಾತ್ರೆ ನಡೆಸಲಾಗುವುದು. ಸಂಜೆ 4 ಗಂಟೆಗೆ ದಾವಣಗೆರೆ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ.
ರಾಣೆಬೆನ್ನೂರು ತಾಲೂಕಿನ ಚಳಗೇರಿಗೆ ನವೀನ್ ಮೃತದೇಹ ತರುತ್ತಿದ್ದಂತೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಗ್ರಾಮಸ್ಥರು, ಅಧಿಕಾರಿಗಳು ಸೇರಿದಂತೆ ಅಪಾರ ಜನ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ. 20 ದಿನಗಳ ನಂತರ ಮೃತದೇಹ ಸ್ವಗ್ರಾಮಕ್ಕೆ ಬಂದಿದ್ದು ಮಗನ ಮೃತದೇಹವನ್ನು ಕಂಡು ತಂದೆ-ತಾಯಿ ಕಣ್ಣೀರಿಟ್ಟಿದ್ದಾರೆ. ನವೀನ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗುತ್ತಿದೆ. ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.