ವಿಶ್ವ ಆರ್ಥಿಕತೆ ಮೇಲೆ ಕೊರೊನಾ ಪ್ರಭಾವ ಬೀರಿದೆ. ಒಮಿಕ್ರಾನ್ ನಿರಂತರವಾಗಿ ಹರಡುತ್ತಿದ್ದರೂ ಭಾರತೀಯರಿಗೆ ಖುಷಿ ಸುದ್ದಿಯೊಂದಿದೆ. ಭಾರತದ ಉದ್ಯೋಗ ಮಾರುಕಟ್ಟೆ ಮೇಲೆ ಕೊರೊನಾ ಹೆಚ್ಚಿನ ಪರಿಣಾಮ ಬೀರಿಲ್ಲ. ಕಳೆದ ಎರಡು-ಮೂರು ತಿಂಗಳುಗಳಲ್ಲಿ ದೇಶದಲ್ಲಿ ಹೊಸ ನೇಮಕಾತಿಗಳು ನಡೆಯುತ್ತಿವೆ.
ನೌಕರಿ ಜಾಬ್ಸ್ ಪೀಕ್ ವರದಿ ಈ ಬಗ್ಗೆ ಮಾಹಿತಿ ನೀಡಿದೆ. ಜಾಬ್ಸ್ ಪೀಕ್, ನೌಕರಿ ಡಾಟ್ ಕಾಮ್ ವೆಬ್‌ಸೈಟ್ ಡೇಟಾ ಆಧಾರದ ಮೇಲೆ ಈ ಸಂಗತಿಯನ್ನು ಹೇಳಿದೆ. ನೌಕ್ರಿ ಜಾಬ್ಸ್ ಪೀಕ್ ಇಂಡೆಕ್ಸ್ ಪ್ರಕಾರ, ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ ಜನವರಿಯಲ್ಲಿ ಮೆಟ್ರೋ ನಗರಗಳಲ್ಲಿ ನೇಮಕಾತಿ ಚಟುವಟಿಕೆ ಶೇಕಡಾ 41 ರಷ್ಟು ಹೆಚ್ಚಳವಾಗಿದೆ.
ಹೈದರಾಬಾದ್ ನಲ್ಲಿ ಶೇಕಡಾ 12ರಷ್ಟು, ಬೆಂಗಳೂರಿನಲ್ಲಿ ಶೇಕಡಾ 11ರಷ್ಟು, ಮುಂಬೈನಲ್ಲಿ ಶೇಕಡಾ 08ರಷ್ಟು, ಚೆನ್ನೈನಲ್ಲಿ ಶೇಕಡಾ 6 ರಷ್ಟು, ಪುಣೆಯಲ್ಲಿ ಶೇಕಡಾ 4ರಷ್ಟು ಹೆಚ್ಚಳ ಕಂಡು ಬಂದಿದೆ. ಆದ್ರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೂನ್ಯ ಮತ್ತು ಕೋಲ್ಕತ್ತಾದಲ್ಲಿ ಕುಸಿತ ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜಾಬ್‌ಸ್ಪೀಕ್ ಇಂಡೆಕ್ಸ್ ವರದಿಯ ಪ್ರಕಾರ, ದೆಹಲಿಯ ನೇಮಕಾತಿ ಚಟುವಟಿಕೆಗಳಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಹಾಗಾಗಿ ದೆಹಲಿಯನ್ನು ಶೂನ್ಯ ವರ್ಗಕ್ಕೆ ಸೇರಿಸಲಾಗಿದೆ. ಅದೇ ಸಮಯದಲ್ಲಿ, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶೂನ್ಯದಿಂದ ಮೂರು ಪ್ರತಿಶತದಷ್ಟು ಕುಸಿತ ದಾಖಲಾಗಿದೆ. ಅಹಮದಾಬಾದ್ ಪ್ರಗತಿಯಲ್ಲಿದೆ, ಕೊಚ್ಚಿ ಮತ್ತು ಜೈಪುರ ಹಿಂದುಳಿದಿವೆ.
ಯಾವ ನಗರದಲ್ಲಿ ಯಾವ ಕ್ಷೇತ್ರದಲ್ಲಿ ಉದ್ಯೋಗ ನೇಮಕಾತಿ ಹೆಚ್ಚಾಗಿದೆ ಎಂಬುದನ್ನು ನೋಡೋದಾದ್ರೆ, ಸಾಫ್ಟ್‌ವೇರ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಕಂಡಿದೆ. ಅದೇ ಸಮಯದಲ್ಲಿ, ರಿಯಲ್ ಎಸ್ಟೇಟ್, ಆತಿಥ್ಯ, ಚಿಲ್ಲರೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಬೆಳವಣಿಗೆ ಕಂಡುಬಂದಿದೆ.