ಮುಂಬೈ: ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥೆ ಮೂಲಕ ಖ್ಯಾತರಾಗಿ ದೇಶದ ಐಸ್ ಕ್ರೀಮ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ರಘುನಂದನ್ ಕಾಮತ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಮಂಗಳೂರು ಮೂಲದ ರಘನಂದನ್ ಕಾಮತ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪತ್ನಿ, ಪುತ್ರರನ್ನು ರಘುನಂದನ್ ಕಾಮತ್ ಅಗಲಿದ್ದಾರೆ.
ಮಂಗಳೂರಿನ ಮೂಲ್ಕಿಯಲ್ಲಿ ಜನಿಸಿದ ರಘುನಂದನ್ ತಮ್ಮ ತಂದೆಯ ಹಣ್ಣಿನ ವ್ಯಾಪಾರ ನೋಡಿಕೊಳ್ಳುತ್ತಿದ್ದರು. 14ನೇ ವಯಸ್ಸಿನಲ್ಲಿ ಶಾಲೆ ಬಿಟ್ಟ ಅವರು ಮುಂಬೈಗೆ ತೆರಳಿ ಸಹೋದರರ ಹೋಟೆಲ್ ನಲ್ಲಿ ಕೆಲಸ ಆರಂಭಿಸಿದ್ದರು. 1984 ರಲ್ಲಿ ನ್ಯಾಚುರಲ್ ಐಸ್ ಕ್ರೀಮ್ ಎಂಬ ಸಂಸ್ಥೆಯನ್ನು ಕೇವಲ ನಾಲ್ವರು ಸಿಬ್ಬಂದಿಯಿಂದ ಆರಂಭಿಸಿದ್ದರು. ಗ್ರಾಹಕರನ್ನು ಆಕರ್ಷಿಸಲು ಪಾವ್ ಬಜ್ಜಿ ಜೊತೆಗೆ ಐಸ್ ಕ್ರೀಮ್ ಕೊಡಲು ಆರಂಭಿಸಿದ್ದು, ಅವರ ನ್ಯಾಚುರಲ್ ಐಸ್ ಕ್ರೀಮ್ ಮಾರುಕಟ್ಟೆಯಲ್ಲಿ ರಾರಾಜಿಸತೊಡಗಿತು. ರಘುನಂದನ್ ಅವರ ನ್ಯಾಚುರಲ್ ಐಸ್ ಕ್ರೀಮ್ 135ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕವಾಗಿ 400 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸುತ್ತದೆ. ದೇಶದ ಟಾಪ್ 10 ಕಂಪನಿಗಳಲ್ಲಿ ಒಂದಾಗಿದೆ.
ರಘುನಂದನ್ ಕಾಮತ್ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ಹಣ್ಣುಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಅನುಕೂಲವಾಗಿತ್ತು. ಮಾತ್ರವಲ್ಲ, ಐಸ್ ಕ್ರೀಮ್ ವ್ಯಾಪಾರ ಆರಂಭಿಸಿದಾ ಅವರಿಗೆ ಅನುಕೂಲವಾಯಿತು. ಸರಳತೆ ಮತ್ತು ಕಠಿಣ ಪರಿಶ್ರಮದಿಂದ ಹಣ್ಣಿನ ವ್ಯಾಪಾರದಲ್ಲಿ ತಂದೆಗೆ ಸಹಾಯ ಮಾಡುತ್ತಾ ಹಣ್ಣುಗಳ ಬಗ್ಗೆ ಅಮೂಲ್ಯ ಜ್ಞಾನ ಪಡೆದುಕೊಂಡ ಅವರು ಸಹಜ ವ್ಯಾಪಾರ ಪ್ರಜ್ಞೆಯೊಂದಿಗೆ ಕಂಪನಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದರು.
ಕಾಮತ್ ಅವರ ಜುಹುನಲ್ಲಿದ್ದ ಚಿಕ್ಕ ಅಂಗಡಿ ಮೊದಲ ವರ್ಷವೇ 5 ಲಕ್ಷ ರೂ. ಆದಾಯ ದಾಖಲಿಸಿತ್ತು. ಇದು ಅವರ ಐಸ್ ಕ್ರೀಮ್ ವ್ಯಾಪಾರ ಹೊಂದಿರುವ ಸಾಮರ್ಥ್ಯದ ಸ್ಪಷ್ಟ ಸೂಚಕವಾಗಿತ್ತು. ನ್ಯಾಚುರಲ್ ಐಸ್ ಕ್ರೀಮ್ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ ಕಾಮತ್ ಪಾವ್ ಬಜ್ಜಿಯನ್ನು ನಿಲ್ಲಿಸಿ ಐಸ್ ಕ್ರೀಮ್ ಮೇಲೆ ಗಮನ ಕೇಂದ್ರೀಕರಿಸಿದರು. ಇದರಿಂದ ಉತ್ಪನ್ನ ಸುಧಾರಣೆಯಾಗಿ ವ್ಯಾಪಾರ ವಿಸ್ತರಿಸಲು ಅವಕಾಶವಾಯಿತು. ರಾಷ್ಟ್ರವ್ಯಾಪಿ ನ್ಯಾಚುರಲ್ ಐಸ್ ಕ್ರೀಮ್ ಮಳಿಗೆಗಳು ಆರಂಭವಾದವು. 2020ರ ವೇಳೆಗೆ ದೇಶಾದ್ಯಂತ 135 ಔಟ್ಲೆಟ್ ಗಳನ್ನು ಕಂಪನಿ ಹೊಂದಿತ್ತು.