ಜನಗಣತಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎಣಿಕೆ ಆರಂಭಿಸಲು ಒಂದು ತಿಂಗಳ ಮೊದಲೇ ಆನ್ಲೈನ್ ಮೂಲಕ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಫಾರ್ಮ್ ಭರ್ತಿ ಮಾಡಲು ಅವಕಾಶ ನೀಡಲಾಗ್ತಿದೆ. ಆನ್ಲೈನ್ ನಲ್ಲಿ ಫಾರ್ಮ್ ಭರ್ತಿ ಮಾಡಿದ ನಂತ್ರ ನಿವಾಸಿಗಳಿಗೆ ಒಂದು ಕೋಡ್ ಸಿಗುತ್ತದೆ. ಇದನ್ನು ಮತ ಎಣಿಕೆಗೆ ಬರುವ ಸದಸ್ಯರಿಗೆ ನೀಡಬೇಕಾಗುತ್ತದೆ.
ಜನಗಣತಿಗಾಗಿ ಸಿದ್ಧಪಡಿಸಿರುವ ಮೊಬೈಲ್ ಅಪ್ಲಿಕೇಷನ್ ನಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ. ಇದ್ರಲ್ಲಿ ಬಯೋಮೆಟ್ರಿಕ್ ಅಥವಾ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ. ಎನ್.ಪಿ.ಆರ್. ನವೀಕರಣದೊಂದಿಗೆ ಜನಗಣತಿಯ ಮೊದಲ ಹಂತ ಏಪ್ರಿಲ್ 1,2020ರಿಂದ ಶುರುವಾಗಬೇಕಿತ್ತು. ಕೊರೊನಾ ಹಿನ್ನಲೆಯಲ್ಲಿ ಇದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಜನಗಣತಿಯ ಕೊನೆಯ ಹಂತ ಹಾಗೂ ಮುಖ್ಯ ಹಂತ ಈ ವರ್ಷ ಮಾರ್ಚ್ 5ರೊಳಗೆ ಮುಕ್ತಾಯಗೊಳ್ಳಬೇಕಿತ್ತು.
ಎನ್ಪಿಆರ್ ಈ ಹಿಂದೆ 2010 ಮತ್ತು 2015 ರ ವರ್ಷಗಳಲ್ಲೂ ಇತ್ತು. ಇದು 119 ಕೋಟಿ ನಿವಾಸಿಗಳ ಎಲೆಕ್ಟ್ರಾನಿಕ್ ಡೇಟಾಬೇಸ್ ಹೊಂದಿತ್ತು. ಎನ್ಪಿಆರ್ ನವೀಕರಣದ ಕುರಿತು ಪೂರ್ವ-ಪರೀಕ್ಷೆಯನ್ನು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯ್ದ ಪ್ರದೇಶಗಳಲ್ಲಿ ನಡೆಸಲಾಗಿದೆ. ಪ್ರತಿ ಕುಟುಂಬ ಮತ್ತು ವ್ಯಕ್ತಿಯ ಇತರ ವಿವರಗಳನ್ನು ನವೀಕರಿಸಬೇಕಾಗುತ್ತದೆ. ಎನ್ಪಿಆರ್ ನವೀಕರಣದ ಸಮಯದಲ್ಲಿ ಯಾವುದೇ ದಾಖಲೆ ಅಥವಾ ಬಯೋಮೆಟ್ರಿಕ್ಗಳನ್ನು ಸಂಗ್ರಹಿಸಲಾಗುವುದಿಲ್ಲ.