ನವದೆಹಲಿ: ಪೋಲಿಯೊ ರೋಗ ನಿರೋಧಕ ಲಸಿಕೆ ಹಾಕುವ ರಾಷ್ಟ್ರೀಯ ಕಾರ್ಯಕ್ರಮವನ್ನು ಮರು ನಿಗದಿ ಮಾಡಲಾಗಿದೆ. ಜನವರಿ 31 ರಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು.
ಈ ಮೊದಲು ಜನವರಿ 17 ರಂದು ದೇಶಾದ್ಯಂತ ಪೋಲಿಯೊ ಲಸಿಕೆ ಹಾಕಲು ದಿನಾಂಕ ನಿಗದಿಪಡಿಸಲಾಗಿತ್ತು. ವಿಶ್ವದಲ್ಲಿಯೇ ಅತಿ ದೊಡ್ಡದಾದ ಕೊರೋನಾ ವ್ಯಾಕ್ಸಿನೇಷನ್ ನೀಡಿಕೆ ಕಾರ್ಯ ಜನವರಿ 16 ರಿಂದ ದೇಶಾದ್ಯಂತ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 17 ರ ಪೋಲಿಯೊ ಲಸಿಕೆ ಕಾರ್ಯ ಮುಂದೂಡಲಾಗಿತ್ತು.
ಆರೋಗ್ಯ ಮಂತ್ರಾಲಯದ ವತಿಯಿಂದ ಭಾರತದ ರಾಷ್ಟ್ರಪತಿಗಳ ಕಚೇರಿಯೊಂದಿಗೆ ಸಮಾಲೋಚನೆ ನಡೆಸಿ ಪೋಲಿಯೊ ಲಸಿಕೆ ಹಾಕುವ ದಿನವನ್ನು ಜನವರಿ 31ಕ್ಕೆ ಮರು ನಿಗದಿ ಮಾಡಲಾಗಿದೆ ಎಂದು ಆರೋಗ್ಯ ಮಂತ್ರಾಲಯ ತಿಳಿಸಿದೆ.
ಜನವರಿ 30 ರಂದು ರಾಷ್ಟ್ರಪತಿ ಭವನದಲ್ಲಿ ಕೆಲವು ಮಕ್ಕಳಿಗೆ ಲಸಿಕೆ ಹನಿ ಹಾಕುವುದರೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಲಿದ್ದಾರೆ. ಕೊರೋನಾ ನಿರ್ವಹಣೆ ಮತ್ತು ವ್ಯಾಕ್ಸಿನೇಷನ್ ಸೇವೆಗಳು, ಕೊರೋನಾ ಅಲ್ಲದ ಅಗತ್ಯವಾದ ಆರೋಗ್ಯ ಸೇವೆಗಳ ನಡುವೆ ಗೊಂದಲಕ್ಕೆ ಕಾರಣವಾಗದಂತೆ ಆರೋಗ್ಯ ಸಚಿವಾಲಯದ ನೀತಿಗೆ ಅನುಗುಣವಾಗಿ ಪೋಲಿಯೊ ಲಸಿಕೆ ಹಾಕುವ ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲು ದಿನಾಂಕವನ್ನು ಮರು ನಿಗದಿಪಡಿಸಲಾಗಿದ್ದು, ಜನವರಿ 31 ರಂದು ರಾಷ್ಟ್ರೀಯ ಪೋಲಿಯೊಯೋ ಲಸಿಕೆ ಅಭಿಯಾನ ನಡೆಯಲಿದೆ. 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ನೀಡಲಾಗುವುದು.