ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳ ಮತ್ತೆ ಎಚ್ಚರಿಕೆ ನೀಡಿದೆ.
ಆಗಸ್ಟ್ 18 ರೊಳಗೆ ಶರಣಾಗುವಂತೆ ಎನ್ಐಎ ಎರಡನೇ ಎಚ್ಚರಿಕೆ ನೀಡಿದೆ. ಎನ್ಐಎ ಕೋರ್ಟ್ ಆದೇಶದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಜೂನ್ 30ರಂದು ಶರಣಾಗುವಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಆರೋಪಿಗಳು ಶರಣಾಗದೆ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 18 ರೊಳಗೆ ಶರಣಾಗುವಂತೆ ಧ್ವನಿವರ್ಧಕದ ಮೂಲಕ ಅನೌನ್ಸ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕೊಡಗು ಭಾಗದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಧ್ವನಿ ವರ್ಧಕದ ಮೂಲಕ ಅನೌನ್ಸ್ ಮಾಡಲಾಗಿದೆ. ಶರಣಾಗದಿದ್ದರೆ ಆರೋಪಿಗಳ ಮನೆ, ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದ್ದು, ಆರೋಪಿಗಳ ಸುಳಿವು ನೀಡಿದಲ್ಲಿ ಬಹುಮಾನವನ್ನು ಕೂಡ ಘೋಷಿಸಲಾಗಿದೆ.
ಆರೋಪಿಗಳ ಮನೆಗಳಿಗೆ ಕೋರ್ಟ್ ನ ಆದೇಶ ಪ್ರತಿಯನ್ನು ಅಧಿಕಾರಿಗಳು ಅಂಟಿಸಿದ್ದಾರೆ. ಅಲ್ಲದೆ, ಆರೋಪಿಗಳ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮುಸ್ತಫಾ, ಅಬೂಬಕರ್ ಸಿದ್ಧಿಕಿ, ಮಸೂದ್, ಅಗ್ನಾಡಿ ಸೇರಿದಂತೆ ಇನ್ನಿತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ.