ತನ್ನ ಹಸಿರು ಕಂಗಳಿಂದ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಮಿಂಚಿದ್ದ ಅಫ್ಘಾನ್ ಹುಡುಗಿಯೊಬ್ಬಳು ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಈಗ ಇಟಲಿಗೆ ಆಗಮಿಸಿದ್ದಾರೆ.
ತಾಲಿಬಾನ್ ನಿಯಂತ್ರಣಕ್ಕೆ ರಕ್ತಸಿಕ್ತ ಅಫ್ಘಾನಿಸ್ತಾನ ಮತ್ತೆ ಸಿಲುಕಿದ ಬಳಿಕ ವಿಶ್ವಾದ್ಯಂತ ಅನೇಕ ದೇಶಗಳು ಅಲ್ಲಿನ ಅಮಾಯಕರನ್ನು ರಕ್ಷಿಸಿ ತಮ್ಮಲ್ಲಿಗೆ ಕರೆತರುವ ಕಾರ್ಯಾಚರಣೆಯೊಂದರಲ್ಲಿ ಈ ಹುಡುಗಿಯನ್ನು ಕರೆತರಲಾಗಿದೆ ಎಂದು ಇಟಲಿ ಸರ್ಕಾರ ತಿಳಿಸಿದೆ.
ಶರ್ಬತ್ ಗುಲಾ ಹಸರಿನ ಈ ಹುಡುಗಿ ತನ್ನನ್ನು ಅಘ್ಫಾನಿಸ್ತಾನ ತೊರೆಯಲು ಸಹಾಯ ಮಾಡಲು ಕೋರಿಕೊಂಡ ಬಳಿಕ ಆಕೆಯ ರಕ್ಷಣಾ ಕಾರ್ಯಾಚರಣೆಯನ್ನು ಇಟಲಿ ಸರ್ಕಾರ ಆಯೋಜಿಸಿದೆ.
1984ರ ಯುದ್ಧದ ಸಂದರ್ಭದಲ್ಲಿ ಅಫ್ಘಾನಿಸ್ತಾನಕ್ಕೆ ಭೇಟಿ ಕೊಟ್ಟಿದ್ದ ಛಾಯಾಗ್ರಾಹಕ ಸ್ಟೀವ್ ಮ್ಯಾಕ್‌ಕರಿ, ಗುಲಾರ ಚಿತ್ರ ಸೆರೆ ಹಿಡಿದು, ಅದು ಎನ್‌ಜಿಸಿ ನಿಯತಕಾಲಿಕೆಯಲ್ಲಿ ಕಂಡು ಭಾರೀ ಫೇಮಸ್ ಆಗಿತ್ತು. ಮ್ಯಾಕ್‌ಕರ‍್ರಿಗೆ ಗುಲಾ 2002ರಲ್ಲಿ ಮತ್ತೊಮ್ಮೆ ಕಂಡಿದ್ದರು.
2014ರಲ್ಲಿ ಪಾಕಿಸ್ತಾನದಲ್ಲಿದ್ದ ಗುಲಾರನ್ನು, ನಕಲಿ ಗುರುತು ಚೀಟಿ ಹೊಂದಿದ್ದ ಆಪಾದನೆ ಮೇಲೆ ಅಧಿಕಾರಿಗಳು ಗಡೀಪಾರು ಮಾಡಿದ್ದರು. ಕಾಬೂಲ್‌ಗೆ ಮರಳಿ ಬಂದ ಬಳಿಕ ಆಕೆಯನ್ನು ಅಧ್ಯಕ್ಷೀಯ ಅರಮನೆಯಲ್ಲಿ ಸತ್ಕರಿಸಿ, ಫ್ಲಾಟ್ ಒಂದರ ಕೀಲಿಯನ್ನು ಕೊಡಲಾಗಿತ್ತು.
ಅಮೆರಿಕನ್ ಪಡೆಗಳು ನಿರ್ಗಮಿಸಿದ ಬಳಿಕ ಅಫ್ಘಾನಿಸ್ತಾನವನ್ನು ಇಡಿಯಾಗಿ ತೆಕ್ಕೆಗೆ ಪಡೆದುಕೊಂಡ ತಾಲಿಬಾನ್ ಮುಷ್ಟಿಯಿಂದ ಅಲ್ಲಿನ ಅಮಾಯಕ ಪ್ರಜೆಗಳನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಇಟಲಿ, ಅಲ್ಲಿಂದ ನೂರಾರು ಮಂದಿಯನ್ನು ಏರ್‌ಲಿಫ್ಟ್ ಮಾಡಿದೆ.