ಪ್ರಧಾನಿ ನರೇಂದ್ರ ಮೋದಿ, ಜೂನ್ 21 ರಿಂದ ದೇಶದ ಪ್ರತಿ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಜೂನ್ 21 ರಿಂದ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮವನ್ನು ಜಾರಿಗೆ ತರಲು ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ.
ರಾಷ್ಟ್ರೀಯ ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸರ್ಕಾರವು ಶೇಕಡಾ 75 ರಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ. ಕೇಂದ್ರದಿಂದ ಪಡೆದ ಲಸಿಕೆ ಪಡೆದ ರಾಜ್ಯ ಸರ್ಕಾರಗಳು ದೇಶದ ಜನರಿಗೆ ಲಸಿಕೆ ನೀಡುವ ಕೆಲಸ ಮಾಡಲಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಲಸಿಕೆ ನೀಡುವ ವಿಚಾರದಲ್ಲಿ ಯಾರಿಗೆ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ರಾಜ್ಯಗಳಿಗೆ ನೀಡುವ ಲಸಿಕೆ ಪ್ರಮಾಣ ಜನಸಂಖ್ಯೆ, ಕೊರೊನಾ ಪ್ರಕರಣಗಳು ಮತ್ತು ಲಸಿಕೆ ವ್ಯರ್ಥವಾಗುವುದನ್ನು ಅವಲಂಬಿಸಿರುತ್ತದೆ.
ಸರ್ಕಾರಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳು ಜನರ ಅನುಕೂಲಕ್ಕಾಗಿ ಆನ್‌ಸೈಟ್ ನೋಂದಣಿ ಪಡೆಯಬಹುದು. ಆದರೆ ಅಂತಿಮ ನಿರ್ಧಾರ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು. ಈ ಹೊಸ ಮಾರ್ಗಸೂಚಿಗಳು ಜೂನ್ 21 ರಿಂದ ಅನ್ವಯವಾಗುತ್ತವೆ.