ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ಪಕ್ಷ ಮತ್ತು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಒಪ್ಪಂದವನ್ನು ಅಂತಿಮಗೊಳಿಸಿದೆ.
ಒಪ್ಪಂದದ ಪ್ರಕಾರ 90 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 32 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ನ್ಯಾಷನಲ್ ಕಾನ್ಫರೆನ್ಸ್ 51 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉಭಯ ಪಕ್ಷಗಳು 5 ಸ್ಥಾನಗಳಲ್ಲಿ ಸೌಹಾರ್ದ ಸ್ಪರ್ಧೆಗೆ ಒಪ್ಪಿಕೊಂಡಿವೆ. ಹರ್ಷ್ ದೇವ್ ಸಿಂಗ್ ನೇತೃತ್ವದ ಪ್ಯಾಂಥರ್ಸ್ ಪಾರ್ಟಿ ಮತ್ತು ಸಿಪಿಐ(ಎಂ) ತಮ್ಮ ಅಭ್ಯರ್ಥಿಗಳನ್ನು ತಲಾ ಒಂದೊಂದು ಸ್ಥಾನದಲ್ಲಿ ನಿಲ್ಲಿಸಲಿವೆ.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮತ್ತು ಜೆ-ಕೆ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ವಿವರ ನೀಡಿದ್ದಾರೆ.