ನವದೆಹಲಿ: ಪ್ರತೀ ವರ್ಷ ಇಂದಿನ ದಿನವನ್ನು ರಾಷ್ಟ್ರೀಯ ಪ್ರಸಾರ ದಿನವನ್ನಾಗಿ ಆಚರಿಸಲಾಗುತ್ತದೆ. 1927ರ ಜುಲೈ 23ರಂದು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರೇಡಿಯೋ ಪ್ರಸಾರವಾದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
1927ರಲ್ಲಿ ಭಾರತೀಯ ಪ್ರಸಾರ ಕಂಪನಿಯ ಅಡಿಯಲ್ಲಿ ಬಾಂಬೆ ನಿಲ್ದಾಣದಿಂದ ದೇಶದ ಮೊಟ್ಟ ಮೊದಲ ರೇಡಿಯೋ ಪ್ರಸಾರ ಮಾಡಲಾಗಿತ್ತು.
ಇತಿಹಾಸ:
ಬಾಂಬೆ ಪ್ರೆಸಿಡೆನ್ಸಿ ರೇಡಿಯೋ ಕ್ಲಬ್ ನ ಕಾರ್ಯಕ್ರಮಗಳೊಂದಿಗೆ 1922ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭವಾಯಿತು. ನಂತರ 1927ರಲ್ಲಿ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪನಿಯನ್ನು ಖಾಸಗಿ ಘಟಕವನ್ನಾಗಿ (ಐಬಿಸಿ) ಮಾಡಲಾಯಿತು. ಹಾಗೂ ಎರಡು ರೇಡಿಯೋ ಕೇಂದ್ರಗಳನ್ನು ನಿರ್ವಹಿಸಲು ಅನುಮತಿ ನೀಡಲಾಯಿತು.
1930 ರ ಮಾರ್ಚ್ 1 ರಂದು ಐಬಿಸಿ ದಿವಾಳಿಯಾಯಿತು. ಹೀಗಾಗಿ ಸರ್ಕಾರವು ಪ್ರಸಾರ ಹಕ್ಕಿನ ಸೌಲಭ್ಯಗಳನ್ನು ವಶಪಡಿಸಿಕೊಳ್ಳುವ ಮೂಲಕ 2 ವರ್ಷಗಳ ಪ್ರಾಯೋಗಿಕ ಆಧಾರದ ಮೇಲೆ 1930ರ ಏಪ್ರಿಲ್ 1ರಂದು ರಾಜ್ಯ ಪ್ರಸಾರ ಸೇವೆಯನ್ನು (ಐಎಸ್ಬಿಎಸ್) ಪ್ರಾರಂಭಿಸಿತು. ನಂತರ 1936ರ ಜೂನ್ ನಲ್ಲಿ ಅಖಿಲ ಭಾರತ ರೇಡಿಯೋ ಆಗಿ ಹೊರಹೊಮ್ಮಿತು.
ಬ್ರಿಟಿಷರಿಂದ ದೇಶ ಸ್ವತಂತ್ರಗೊಂಡ ಬಳಿಕ ದೆಹಲಿ, ಬಾಂಬೆ, ಕೋಲ್ಕತ್ತಾ, ಮದ್ರಾಸ್, ತಿರುಚಿರಪಳ್ಳಿ ಹಾಗೂ ಲಕ್ನೋ ಎಂಬ ಆರು ರೇಡಿಯೋ ಕೇಂದ್ರಗಳು ಇದ್ದವು. ಆದಾಗ್ಯೂ ಎಫ್ಎಂ ಪ್ರಸಾರವು ಸುಮಾರು 30 ವರ್ಷಗಳ ನಂತರ 1977ರ ಜುಲೈ 23ರಂದು ಚೆನ್ನೈನಲ್ಲಿ ಪ್ರಾರಂಭವಾಯಿತು.
ಪ್ರಸ್ತುತ ಸನ್ನಿವೇಶ:
ಅಖಿಲ ಭಾರತ ರೇಡಿಯೋವನ್ನು 1956ರಿಂದ ಅಧಿಕೃತವಾಗಿ ಆಕಾಶವಾಣಿ ಎಂದು ಕರೆಯಲಾಗುತ್ತದೆ. ಇದು ವಿಶ್ವದ ಅತಿ ದೊಡ್ಡ ರೇಡಿಯೋ ನೆಟ್ ವರ್ಕ್ ಅನ್ನೋ ಖ್ಯಾತಿ ಪಡೆದಿದೆ. ಅಲ್ಲದೆ ಭಾಷೆಗಳ ಪ್ರಸಾರಕ್ಕೆ ಅನುಗುಣವಾಗಿ ವಿಶ್ವದ ಅತಿ ದೊಡ್ಡ ಪ್ರಸಾರ ಸಂಸ್ಥೆಗಳಲ್ಲಿ ಒಂದಾಗಿದೆ.
ಆಕಾಶವಾಣಿಯು ದೇಶದಾದ್ಯಂತ 420 ನಿಲ್ದಾಣಗಳನ್ನು ಹೊಂದಿದೆ. ಇದು ಸುಮಾರು ಶೇಕಡಾ 92 ಪ್ರದೇಶವನ್ನು ಹಾಗೂ ಒಟ್ಟು ಜನಸಂಖ್ಯೆಯ ಶೇಕಡಾ 99 ರಷ್ಟು ಜನರನ್ನು ತಲುಪಿದೆ ಎಂದು ವರದಿಗಳು ತಿಳಿಸಿವೆ.
ದೇಶದಲ್ಲಿ ಖಾಸಗಿ ರೇಡಿಯೋ 1993ರಲ್ಲಿ ದೆಹಲಿ ಹಾಗೂ ಮುಂಬೈನ ಎಫ್ಎಂ ಚಾನೆಲ್ ಗಳಲ್ಲಿ ಪ್ರತಿದಿನ ಎರಡು ಗಂಟೆಗಳ ಕಾಲ ಪ್ರಸಾರ ಮಾಡುವುದರ ಮೂಲಕ ಪ್ರಾರಂಭವಾಯಿತು. ಸುಮಾರು 8 ವರ್ಷಗಳ ಬಳಿಕ ರೇಡಿಯೋ ಪ್ರಸಾರ ಉದ್ಯಮದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯ ಮೊದಲ ಹಂತವು ರೇಡಿಯೋ ಪರವಾನಗಿಗಳಿಗಾಗಿ ಸರ್ಕಾರವು ಮುಕ್ತ ಹರಾಜು ನಡೆಸುವ ಮೂಲಕ ಪ್ರಾರಂಭವಾಯಿತು.