ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಅಂಜನಾ ರೆಹಮಾನ್(60) ನಿಧನರಾಗಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಸುಮಾರು 300 ಚಲನಚಿತ್ರಗಳನ್ನು ಮಾಡಿರುವ ನಟಿ ಶನಿವಾರ ನಿಧನರಾಗಿದ್ದಾರೆ.
ಅವರ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಸ್ನೇಹಿತರು, ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ.
ನಟಿ ಬಂಗಬಂಧು ಶೇಖ್ ಮುಜೀಬ್ ವೈದ್ಯಕೀಯ ವಿಶ್ವವಿದ್ಯಾಲಯ(ಬಿಎಸ್ಎಂಎಂಯು) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಚಿತ್ರ ಕಲಾವಿದರ ಸಂಘದ ಅಧ್ಯಕ್ಷೆ ಮಿಶಾ ಸೌದಾಗೋರ್ ಅವರು ಅಂಜನಾ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅವರ ಗೌರವಾರ್ಥವಾಗಿ ಶನಿವಾರ ಮಧ್ಯಾಹ್ನ ಎಫ್ಡಿಸಿಯಲ್ಲಿ ಅಂಜನಾ ಅವರ ನಮಾಜ್-ಎ-ಜನಾಜಾ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಅಂಜನಾ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿದ್ದು, ಔಷಧಿಗಳು ಕೆಲಸ ಮಾಡುವುದನ್ನು ನಿಲ್ಲಿಸುವ ಹಂತಕ್ಕೆ ಆರೋಗ್ಯ ಸ್ತಿತಿ ಹದಗೆಟ್ಟಿದೆ. ನಂತರ ರಕ್ತದ ಸೋಂಕು ಇದೆ ಎಂದು ತಿಳಿದುಬಂದಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹಲವಾರು ದಿನ ಸಿಸಿಯುನಲ್ಲಿ ಜೀವನ್ಮರಣ ಹೋರಾಟದಲ್ಲಿ ಕಳೆದಿದ್ದಾರೆ. ಚಿಕಿತ್ಸೆ ನೀಡಲಾಗಿದ್ದರೂ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ಬುಧವಾರ ಬಿಎಸ್ಎಂಎಂಯು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅವರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.