ವಿಮಾನ ಲ್ಯಾಂಡ್ ಆಗುವಾಗಲೇ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಅದರಲ್ಲಿದ್ದ ಪ್ರಯಾಣಿಕರೆಲ್ಲರೂ ಸಹ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಇಂತಹದೊಂದು ಘಟನೆ ಅಟ್ಲಾಂಟಾ ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ನಡೆದಿದ್ದು, ಪ್ರಯಾಣಿಕರೊಬ್ಬರು ಎದೆ ನಡುಗಿಸುವ ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ.
ಭಾನುವಾರದಂದು ಟಾಂಪಾದಿಂದ ಅಟ್ಲಾಂಟಾ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಸ್ಪಿರಿಟ್ ಏರ್ಲೈನ್ಸ್ ನ 383 ಸಂಖ್ಯೆ ವಿಮಾನದ ಬಲಭಾಗದ ಬ್ರೇಕ್ ಶಾಖ ಹೆಚ್ಚಾದ ಪರಿಣಾಮ ಬೆಂಕಿ ತಗುಲಿದೆ. ಇದರ ಪರಿಣಾಮವಾಗಿ ಹೊಗೆ ಸಹ ಆವರಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಿತರಾಗಿದ್ದಾರೆ.
ಕೂಡಲೇ ಪರಿಸ್ಥಿತಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದ್ದು, ವಿಮಾನವನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಪ್ರಯಾಣಿಕರನ್ನು ಕೂಡಲೇ ಇಳಿಸಿಕೊಳ್ಳಲಾಗಿದೆ. ಇದರಿಂದಾಗಿ ಎಲ್ಲರೂ ಸಹ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸದ್ಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಬೆಂಕಿ ತಾಗಲು ಕಾರಣವೇನೆಂಬುದನ್ನು ಪರಿಶೀಲಿಸಲಾಗುತ್ತಿದೆ.