ದೇಶವು 100 ಕೋಟಿ ಡೋಸ್ ಕೊರೊನಾ ಲಸಿಕೆ ದಾಖಲೆಯನ್ನು ಪೂರೈಸಿರುವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. ಕೊರೊನಾ ಲಸಿಕೆ ವಿಚಾರದಲ್ಲಿ 100 ಡೋಸ್ ಹಂಚಿಕೆ ಪೂರೈಸುವ ಮೂಲಕ ಭಾರತವು ಕೊರೊನಾ ಸಾಂಕ್ರಾಮಿಕವನ್ನು ಹೇಗೆ ನಿರ್ವಹಿಸುತ್ತೆ ಎಂದು ಪ್ರಶ್ನೆ ಮಾಡಿದವರಿಗೆ ನಮ್ಮ ದೇಶವು ಉತ್ತರ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ರು.
ಇದು ನಿಜಕ್ಕೂ ನಮ್ಮ ಸಮಾಜದಿಂದ ನಡೆದ ಭಗೀರಥ ಪ್ರಯತ್ನವಾಗಿದೆ. ಪ್ರತಿ ಡೋಸ್ ಲಸಿಕೆಯನ್ನು ನೀಡಲು ಆರೋಗ್ಯ ಕಾರ್ಯಕರ್ತರು 2 ನಿಮಿಷ ಸಮಯ ತೆಗೆದುಕೊಂಡಿದ್ದಾರೆ ಎಂದು ಅಂದಾಜಿಸೋಣ. ಈ ಅವಧಿಯಲ್ಲಿ ಇಂತಹ ದೊಡ್ಡ ಮೈಲಿಗಲನ್ನು ನಮ್ಮ ದೇಶ ತಲುಪಿದೆ ಎಂದರೆ ಸುಮಾರು 41 ಲಕ್ಷ ಮಂದಿಯ ದಿನದ ಶ್ರಮ ಹಾಗೂ 11 ಸಾವಿರ ಮಂದಿಯ ವರ್ಷಗಳ ಶ್ರಮ ಇದರಲ್ಲಿದೆ ಎಂದು ಹೇಳಿದ್ದಾರೆ.
ಮೊದಲೆಲ್ಲ ಯಾವುದೇ ಉತ್ಪನ್ನಗಳನ್ನು ಆ ದೇಶದಲ್ಲಿ ನಿರ್ಮಿಸಲಾಗಿದೆ. ಈ ದೇಶದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಜನತೆಗೆ ಸ್ವದೇಶಿ ನಿರ್ಮಿತ ಉತ್ಪನ್ನಗಳ ಬೆಲೆ ಗೊತ್ತಾಗಿದೆ. ಇದರಿಂದ ದೇಶದಲ್ಲಿ ಸಕಾರಾತ್ಮಕ ಅಂಶವು ಹರಿದಾಡುತ್ತಿದೆ. ಸ್ವದೇಶಿ ನಿರ್ಮಿತ ವಸ್ತುಗಳನ್ನೇ ಖರೀದಿಸಿ ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ರು.
ಮುಂದಿನ ಹಬ್ಬಗಳಿಗೆ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಅನೇಕರು ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಕೊರೊನಾವನ್ನು ಕಡೆಗಣಿಸುತ್ತಿದ್ದಾರೆ. ಆದರೆ ಯುದ್ಧವನ್ನು ಸಂಪೂರ್ಣವಾಗಿ ಗೆಲ್ಲದ ಹೊರತು ಅಸ್ತ್ರವನ್ನು ಕೆಳಗೆ ಇಳಿಸುವಂತಿಲ್ಲ. ಹೀಗಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ನಿಮ್ಮ ಜೀವನದ ಭಾಗವಾಗಬೇಕು ಎಂದು ಹೇಳಿದರು.
ಮನೆಯಿಂದ ಹೊರಹೋಗುವಾಗ ಹೇಗೆ ಚಪ್ಪಲಿಗಳನ್ನು ಧರಿಸುವುದು ಒಂದು ಸಾಮಾನ್ಯ ಪದ್ಧತಿಯೋ ಅದೇ ರೀತಿ ಮಾಸ್ಕ್ ಬಳಕೆ ಕೂಡ ಸಾಮಾನ್ಯವಾಗಬೇಕು ಎಂದು ಪ್ರಧಾನಿ ಜನತೆಗೆ ಕಿವಿಮಾತು ಹೇಳಿದ್ದಾರೆ.