ಪ್ರಯಾಗ್ ರಾಜ್: ಹೆಚ್ಚುತ್ತಿರುವ ಜನಸಂಖ್ಯೆಯೇ ಭಾರತಕ್ಕೆ ಬಹುದೊಡ್ಡ ಸವಾಲಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮೋತಿಲಾಲ್ ನೆಹರು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತದ ಜನಸಂಖ್ಯೆ 144 ಕೋಟಿಗಿಂತಲೂ ಹೆಚ್ಚಾಗಿದೆ. ಆದರೆ, ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಆರ್ಥಿಕತೆಗೆ ಒಳಿತು ಎಂದು ತಜ್ಞರು ಹೇಳುತ್ತಾರೆ. ಇದೇ ಸಮಯದಲ್ಲಿ ವಯಸ್ಸಾದ ಜನಸಂಖ್ಯೆ ಕಾಲಾಂತರದಲ್ಲಿ ಹೆಚ್ಚಾಗುವುದು ಆರ್ಥಿಕತೆಗೆ ದೊಡ್ಡ ಸವಾಲು ತರುತ್ತದೆ. ದೇಶದ ಪ್ರಗತಿಗೆ ಕೊಡುಗೆ ನೀಡುವುದು ನೈಜ ವೃತ್ತಿಪರರ ಹೊಣೆಯಾಗಿದೆ ಎಂದು ಹೇಳಿದ್ದಾರೆ.
ದೊಡ್ಡ ಆಕಾಂಕ್ಷೆ, ದೊಡ್ಡ ಕನಸು ಅಗತ್ಯ. ಇದನ್ನು ನನಸು ಮಾಡಲು ನಾವೆಷ್ಟು ಶ್ರಮಿಸುತ್ತೇವೆ ಎನ್ನುವುದು ಮುಖ್ಯವಾಗಿದೆ. ಭಾರತವು ಜನಸಂಖ್ಯೆ, ತಲಾದಾಯ, ಭೂಮಿ ಲಭ್ಯತೆ, ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಬಹುದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಮುಂದಿನ ತಲೆಮಾರಿನ ಜೀವನ ಸುಧಾರಣೆಗೆ ಒಂದು ಪೀಳಿಗೆ ಅನೇಕ ತ್ಯಾಗ ಮಾಡಲೇಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.