ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆ ಕ್ಯಾತೆ ಮುಗಿಯುವಂತೆ ಕಾಣುತ್ತಿಲ್ಲ. ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜು ಇದೀಗ ಆಕ್ರೋಶ ಹೊರಹಾಕ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಇವರಿಬ್ಬರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಎಂಬ ಸುದ್ದಿ ಕೂಡ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಕೆ.ಸಿ. ನಾರಾಯಣ ಗೌಡ, ಆಸೆ ಎಲ್ಲರಿಗೂ ಇರುತ್ತದೆ, ಆಸೆ ಪಟ್ಟವರಿಗೆಲ್ಲರಿಗೂ ಕೇಳಿದ ಖಾತೆ ನೀಡೋಕೆ ಸಾಧ್ಯವೇ ಎಂದು ಪ್ರಶ್ನೆ ಮಾಡುವ ಮೂಲಕ ಮಿತ್ರ ಮಂಡಳಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಯಡಿಯೂರಪ್ಪನವರ ಸಹಕಾರ ಈ ಸರ್ಕಾರಕ್ಕೆ ಇದೆ. ಇವೆಲ್ಲವನ್ನು ನಿಭಾಯಿಸಲು ಬೊಮ್ಮಾಯಿ ಸಮರ್ಥರಿದ್ದಾರೆ. ಹೀಗಾಗಿ ಅವರು ಎಲ್ಲವನ್ನೂ ಶೀಘ್ರದಲ್ಲೇ ಸರಿಪಡಿಸಲಿದ್ದಾರೆ ಎಂದು ಹೇಳಿದ್ರು. ಇದೇ ವೇಳೆ ಆನಂದ್ ಸಿಂಗ್ ರಾಜೀನಾಮೆ ವಿಚಾರವಾಗಿಯೂ ಮಾತನಾಡಿದ ಅವ್ರು, ಇದೊಂದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.
ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಆನಂದ್ ಸಿಂಗ್ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಆದರೆ ಅವರಿಗೆ ಪ್ರವಾಸೋದ್ಯಮ ಖಾತೆ ಹಂಚಿಕೆ ಆಗಿರೋದು ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಆನಂದ್ ಸಿಂಗ್ ಸಚಿವ ಸ್ಥಾನದ ಜೊತೆಯಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗ್ತಿದೆ. ಇತ್ತ ಎಂಟಿಬಿ ನಾಗರಾಜು ಕೂಡ ತಮಗೆ ನೀಡಿರುವ ಪೌರಾಡಳಿತ ಖಾತೆಯ ವಿರುದ್ಧ ಬಹಿರಂಗವಾಗಿಯೇ ಬೇಸರ ಹೊರ ಹಾಕುತ್ತಿದ್ದಾರೆ. ಖಾತೆ ಬದಲಾವಣೆಯಾಗದಿದ್ದಲ್ಲಿ ಸಚಿವ ಸ್ಥಾನಕ್ಕೆ ಎಂಟಿಬಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.