ಬೆಂಗಳೂರು : ತಿರುಪತಿಯಲ್ಲಿ ಮತ್ತೆ ನಂದಿನಿಯ ಘಮಲು ಹರಡುತ್ತಿದೆ.ತಿರುಪತಿ ದೇವಾಲಯಕ್ಕೆ ತುಪ್ಪ ಸರಬರಾಜು ಮಾಡುತ್ತಿದ್ದ ಕೆಎಂಎಫ್ ಕೆಲಕಾಲ ಕಾರಣಾಂತರಗಳಿಂದ ಸ್ಥಗಿತಗೊಳಿಸಿತ್ತು, ಈಗ ಮತ್ತೊಮ್ಮೆ ತಿರುಪತಿಗೆ ಹೊರಟಿದ್ದ ಲಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು.
ತಿರುಪತಿಯತ್ತ ಹೊರಟ ತುಪ್ಪದ ಟ್ಯಾಂಕರ್ ಗೆ ಗೃಹ ಕಚೇರಿ ಕೃಷ್ಣಾದಲ್ಲಿ ತೋರಿದ ಮುಖ್ಯಮಂತ್ರಿ, ಬುಧವಾರ ಹಸಿರು ನಿಶಾನೆ ತೋರಿದರು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ “ನಂದಿನಿ ಬ್ರಾಂಡ್” ಮತ್ತೊಮ್ಮೆ ತಿರುಪತಿ ದೇವಾಲಯದ ಪ್ರಸಾದಕ್ಕೆ ತುಪ್ಪ ಪೂರೈಸುವ ಪುಣ್ಯಕಾರ್ಯಕ್ಕೆ ಅಣಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ತಿರುಪತಿ ತಿರುಮಲ ದೇವಸ್ಥಾನದಿಂದ 350 ಮೆಟ್ರಿಕ್ ಟನ್ ತುಪ್ಪ ಪೂರೈಕೆಯ ಬೇಡಿಕೆಯಿದ್ದು, ಇದರ ಅಂಗವಾಗಿ ಇಂದು ತಿರುಪತಿಯತ್ತ ಹೊರಟ ತುಪ್ಪದ ಟ್ಯಾಂಕರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಸಿರು ನಿಶಾನೆ ತೋರಿದರು.
2013-14ನೇ ಸಾಲಿನಿಂದ 2021-22ರವರೆಗೆ 5 ಸಾವಿರ ಟನ್ ತುಪ್ಪವನ್ನು ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆರಂಭಿಕವಾಗಿ 350 ಟನ್ ತುಪ್ಪವನ್ನು ಸರಬರಾಜು ಮಾಡಲು ಟೆಂಡರ್ ಮೂಲಕ ಬೇಡಿಕೆ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್ ತಿಳಿಸಿದೆ.