ಮಹಾರಾಷ್ಟ್ರದ ನಂದೇಡ್‌ನ ಗಣೇಶನಗರದಲ್ಲಿ ಬುಧವಾರ ಬೆಳಿಗ್ಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಖೋಬ್ರಾಗಡೆ ನಗರದ ನಿವಾಸಿ ಅಮೋಲ್ ಭುಜಬಲ್ (Amol Bhujbal) ಹತ್ಯೆಯಾದ ದುರ್ದೈವಿ. ಸ್ಥಳೀಯ ಅಂಗಡಿಯೊಂದರ ಹೊರಗೆ ತನ್ನ ಸ್ಕೂಟರ್‌ನಲ್ಲಿ ಕಾಯುತ್ತಿದ್ದಾಗ ಆತನ ಮೇಲೆ ದಾಳಿ ನಡೆದಿದೆ. ಹಗಲು ಹೊತ್ತಿನಲ್ಲಿ ನಡೆದ ಈ ಭೀಕರ ಹತ್ಯೆಯ ಬೆಚ್ಚಿಬೀಳಿಸುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅಮೋಲ್, ಬೆಳಿಗ್ಗೆ 7 ಗಂಟೆ ಸುಮಾರಿಗೆ ದಿನಸಿ ಸಾಮಾನು ಖರೀದಿಸಲು ಅಂಗಡಿಗೆ ಬಂದಿದ್ದ. ಈ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ಮುಸುಕುಧಾರಿಗಳು ಆತನನ್ನು ಹಿಂಬದಿಯಿಂದ ಸಮೀಪಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಾಕುಗಳಿಂದ ಸಜ್ಜುಗೊಂಡಿದ್ದ ದುಷ್ಕರ್ಮಿಗಳು ಅಮೋಲ್‌ನ ಕುತ್ತಿಗೆ, ಬೆನ್ನು ಮತ್ತು ಹೊಟ್ಟೆಗೆ ಹಲವು ಬಾರಿ ಇರಿದಿದ್ದಾರೆ. ʼಟೈಮ್ಸ್ ಆಫ್ ಇಂಡಿಯಾʼ ವರದಿಯ ಪ್ರಕಾರ, ಹಲ್ಲೆ ಎಷ್ಟು ತೀವ್ರವಾಗಿತ್ತೆಂದರೆ ಅಮೋಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಒಬ್ಬ ಹಂತಕ ಹೆಲ್ಮೆಟ್ ಧರಿಸಿದ್ದರೆ, ಇನ್ನೊಬ್ಬ ಕಪ್ಪು ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದ. ದಾಳಿಯ ನಂತರ ಇಬ್ಬರೂ ತಕ್ಷಣವೇ ಪರಾರಿಯಾಗಿದ್ದಾರೆ. ಬೆಳಗಿನ ಜಾವ ಮತ್ತು ಜನಸಂದಣಿ ಇಲ್ಲದ ಕಾರಣ ಹಂತಕರಿಗೆ ಸುಲಭವಾಗಿ ಪರಾರಿಯಾಗಲು ಅವಕಾಶ ಸಿಕ್ಕಿದೆ.
ಪೊಲೀಸರು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಹಂತಕರು ಬಳಸಿದ ಸಂಭಾವ್ಯ ಮಾರ್ಗಗಳನ್ನು ಗುರುತಿಸಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಮತ್ತು ಸ್ಥಳೀಯರು ಮತ್ತು ಅಂಗಡಿಕಾರರನ್ನು ಪ್ರಶ್ನಿಸಲು ಬಹು ತಂಡಗಳನ್ನು ರಚಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಭಿನಾಶ್ ಕುಮಾರ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ, ತಪ್ಪಿತಸ್ಥರನ್ನು ಬಂಧಿಸಲು ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. “ನಾವು ಎಲ್ಲಾ ಸಂಭಾವ್ಯ ಕೋನಗಳನ್ನು ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ ಮತ್ತು ಇದಕ್ಕೆ ಕಾರಣರಾದವರನ್ನು ಗುರುತಿಸಿ ಬಂಧಿಸಲು ನಮ್ಮ ತಂಡಗಳು ಹಗಲಿರುಳು ಕೆಲಸ ಮಾಡುತ್ತಿವೆ. ಈ ಪ್ರದೇಶದಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಪರಿಹರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಬಹುದು” ಎಂದು ಅವರು ಹೇಳಿದ್ದಾರೆ.
ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ತನಿಖಾಧಿಕಾರಿಗಳು ವೈಯಕ್ತಿಕ ದ್ವೇಷ ಅಥವಾ ಪೂರ್ವಯೋಜಿತ ದಾಳಿ ಸೇರಿದಂತೆ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣವನ್ನು ಪರಿಹರಿಸಲು ಸಹಾಯ ಮಾಡುವ ಯಾವುದೇ ಮಾಹಿತಿಯೊಂದಿಗೆ ಸಾರ್ವಜನಿಕರು ಮುಂದೆ ಬರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
#CaughtOnCam: Nanded Man Stabbed By 2 Unknown Assailants In Ganeshnagar; Probe Underyway #Nanded #Maharashtra pic.twitter.com/6zmmVlDdRJ
— Free Press Journal (@fpjindia) February 28, 2025