ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಸಿನಿಮಾ, ಧಾರಾವಾಹಿ ಸೇರಿದಂತೆ ಚಿತ್ರೀಕರಣಕ್ಕೆ ಬಿಎಂ ಆರ್ ಸಿ ಎಲ್ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ಮೆಟ್ರೋ ರೈಲಿನಲ್ಲಿಯೂ ಲೈಟ್ಸ್, ಕ್ಯಾಮರಾ, ಆಕ್ಷನ್ ಸೌಂಡ್ ಜೋರಾಗಲಿದೆ. ಪ್ರಯಾಣಿಕರಿಗೆ ಮೆಟ್ರೋದಲ್ಲಿ ನಟ-ನಟಿಯರು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ದೆಹಲಿ, ಚೆನ್ನೈ ಮೆಟ್ರೋ ಬಳಿಕ ಇದೀಗ ಬೆಂಗಳೂರು ಮೆಟ್ರೋ ರೈಲಿನಲ್ಲಿಯೂ ಶೂಟಿಂಗ್ ಗೆ ಅವಕಾಶ ನೀಡಲಾಗಿದೆ. ಮೆಟ್ರೋ ರೈಲಿನಲ್ಲಿ ಸಿನಿಮಾ ಹಾಗೂ ಸೀರಿಯಲ್ ಚಿತ್ರೀಕರಣಗಳಿಗೆ ಬಿಎಂಎಂ ಆರ್ ಸಿ ಎಲ್ ಅನುಮತಿ ನೀಡಿದೆ.
ಬೆಂಗಳೂರು ಮೆಟ್ರೋ ರೈಲಿನಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮಿಳಾ ಜೋಶಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ವಿಚಾರ. ಚಿತ್ರರಂಗ ಇದನ್ನು ಸ್ವಾಗತಿಸುತ್ತದೆ. ಚಿತ್ರೀಕರಣಕ್ಕೆ ಅವಕಾಶ ನೀಡಿರುವುದರಿಂದ ಚಿತ್ರೀಕರಣ ಇನ್ನಷ್ಟು ಬೆಳೆಯಲಿದೆ ಎಂದಿದ್ದಾರೆ.