ಬೆಂಗಳೂರಿನ ಸಂಚಾರ ದಟ್ಟಣೆಗೆ ಒಂದಷ್ಟು ಕಡಿವಾಣ ಹಾಕುತ್ತಿರುವ ‘ನಮ್ಮ ಮೆಟ್ರೋ’ ದಿನೇ ದಿನೇ ಹೆಚ್ಚು ಮಂದಿಯನ್ನು ಆಕರ್ಷಿಸುತ್ತಿದೆ. ಮಹಾನಗರಿಯ ಭಾರಿ ಟ್ರಾಫಿಕ್ ನಲ್ಲಿ ವಾಹನ ಚಲಾಯಿಸುವ ಬದಲು ‘ನಮ್ಮ ಮೆಟ್ರೋ’ ಪ್ರಯಾಣ ಆರಾಮದಾಯಕ ಎಂಬ ಕಾರಣಕ್ಕೆ ಬಹುತೇಕರು ಇದನ್ನೇ ಆಶ್ರಯಿಸುತ್ತಾರೆ. ಇದೀಗ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ‘ನಮ್ಮ ಮೆಟ್ರೋ’ ಮತ್ತೊಂದು ದಾಖಲೆ ಬರೆದಿದೆ.
ಆಗಸ್ಟ್ 14ರಂದು ಒಂದೇ ದಿನ ನಮ್ಮ ಮೆಟ್ರೋದಲ್ಲಿ 9.2 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಹೊಸ ದಾಖಲೆಯಾಗಿದೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್ ವರೆಗೆ ಸಾಗುವ ನೇರಳೆ ಮಾರ್ಗದಲ್ಲಿ ಆ ದಿನದಂದು 4.4 ಲಕ್ಷ ಪ್ರಯಾಣಿಕರು ಪಯಣಿಸಿದ್ದರೆ, ಇದೇ ದಿನ ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ನಾಗಸಂದ್ರ ನಡುವೆ ಸಂಚರಿಸುವ ನಮ್ಮ ಮೆಟ್ರೋದಲ್ಲಿ 3 ಲಕ್ಷ ಪ್ರಯಾಣಿಕರು ಓಡಾಡಿದ್ದಾರೆ. ಇನ್ನು ಈ ಎರಡು ಮಾರ್ಗಗಳನ್ನು ಸಂಪರ್ಕಿಸುವ ಮೆಜೆಸ್ಟಿಕ್ ನ ಇಂಟರ್ಚೇಂಜ್ ಸ್ಟೇಷನ್ ನಿಂದ 1.7 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
ಆಗಸ್ಟ್ 14ರಂದು 9.2 ಲಕ್ಷ ಮಂದಿ ಪ್ರಯಾಣಿಕರು ಸಂಚರಿಸಿರುವ ಕಾರಣಕ್ಕೆ ನಮ್ಮ ಮೆಟ್ರೋಗೆ ಒಂದೇ ದಿನ 2.35 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್. ವಿಶ್ವನಾಥ್ ಚವಾಣ್ ತಿಳಿಸಿದ್ದಾರೆ. ವಾರಾಂತ್ಯದ ದೀರ್ಘ ರಜೆ, ಸ್ವಾತಂತ್ರೋತ್ಸವದ ನಿಮಿತ್ತ ಲಾಲ್ ಬಾಗ್ ನಲ್ಲಿ ಆಕರ್ಷಕ ಫ್ಲವರ್ ಶೋ ಏರ್ಪಡಿಸಿರುವುದು ‘ನಮ್ಮ ಮೆಟ್ರೋ’ ದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋಗೆ ಹೆಚ್ಚಿನ, ಮಾರ್ಗಗಳು ಸೇರಿಕೊಳ್ಳಲಿದ್ದು ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.