ಬೆಂಗಳೂರು: ಸಂಚಾರ ದಟ್ಟಣೆಯಿಂದ ಬಳಲುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರಿಗರಿಗೆ ಜೀವನಾಡಿಯಂತೆ ಬಂದಿದ್ದು ನಮ್ಮ ಮೆಟ್ರೋ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಆರಂಭವಾಗಿ ಇಂದಿಗೆ 13 ವರ್ಷಗಳು ಪೂರೈಸಿವೆ.
2011ರ ಅಕ್ಟೋಬರ್ 20ರಂದು ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮೊದಲ ಹಂತದ ಮೆಟ್ರೋ ಬೈಯ್ಯಪ್ಪನಹಳ್ಳಿಯಿಂದ ಮಹಾತಮಾಗಾಂಧಿ ರಸ್ತೆವರೆಗಿನ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಇಂದು ನಮ್ಮ ಮೆಟ್ರೋ ಒಟ್ಟು 56.1 ಕಿ.ಮೀವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳಿಗೂ ಮೆಟ್ರೋ ವಿಸ್ತರಣೆಯಾಗಲಿದೆ.
ನಮ್ಮ ಮೆಟ್ರೋದಲ್ಲಿ ಪ್ರತಿದಿನ 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಆಗಸ್ಟ್ 14ರಂದು ನಮ್ಮ ಮೆಟ್ರೋ ಅತಿ ಹೆಚ್ಚು ದೈನಂದಿನ ಪ್ರಯಾಣಿಕರ ಸಂಖ್ಯೆ ದಾಖಲಿಸಿದೆ. ಅಂದು 9,17,365 ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ನಮ್ಮ ಮೆಟ್ರೋ ಒಟ್ಟು 73.81 ಕಿ.ಮೀ ವರೆಗೆ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದು ಬಿಎಂಆರ್ ಸಿಎಲ್ ಸಂತಸ ಹಂಚಿಕೊಂಡಿದೆ.