ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತಿದೊಡ್ಡ ಸಂಪರ್ಕ ಸಾರಿಗೆ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.
ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಒಂದೇ ದಿನ ದಾಖಲೆಯ ಪ್ರಮಾಣದಲ್ಲಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಬೇಸಿಗೆ ರಜೆ ಹಾಗೂ ರಣ ಬಿಸಿಲಿನಿಂದಾಗಿ ಕಾರು, ಬೈಕು ಬಿಟ್ಟು ಹೆಚ್ಚಾಗಿ ಜನರು ಮೆಟ್ರೋ ಹಾಗೂ ಬಸ್ ಗಳನ್ನು ಅವಲಂಭಿಸುತ್ತಿದ್ದಾರೆ.
ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ಒಂದೇ ದಿನ ನಮ್ಮ ಮೆಟ್ರೋದಲ್ಲಿ 7.9 ಲಕ್ಷ ಜನರು ಪ್ರಯಾಣ ಮಾಡಿದ್ದಾರೆ. ಮೆಟ್ರೋದಲ್ಲಿ ಎಸಿ ಜೊತೆಗೆ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ. ಹಾಗಾಗಿ ರಣ ಬಿಸಿಲಿನಲ್ಲಿ ಸ್ವಂತ ವಾಹನಗಳಲ್ಲಿ ಹೋಗುವುದಕ್ಕಿಂತ ಆರಾಮವಾಗಿ ಮೆಟ್ರೋದಲ್ಲಿ ಪ್ರಯಾಣಿಸಬಹುದಾಗಿದೆ.
ಇನ್ನು ಬಿಎಂಟಿಸಿ ಬಸ್ ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಒಂದೇ ದಿನ 10 ಲಕ್ಷ ಜನ ಪ್ರಯಾಣಿಸಿದ್ದಾರೆ. ಅದರಲ್ಲಿಯೂ ಬಿಎಂಟಿಸಿ ಎಸಿ ಬಸ್ ಗಳಲ್ಲಿ ಜನವೋ ಜನ.
ಈ ಹಿಂದೆ ನಮ್ಮ ಮೆಟ್ರೋದಲ್ಲಿ ದಿನಕ್ಕೆ 5-6 ಲಕ್ಷ ಪ್ರಯಾಣಿಸುತ್ತಿದ್ದರು. ಈಗ ಬೇಸಿಗೆ ರಜೆ, ಬಿಸಿಲ ಝಳದಿಂದಾಗಿ ದಿನಕ್ಕೆ 7 ಲಕ್ಷಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದು, 8 ಲಕ್ಷಕ್ಕೂ ಏರಿಕೆಯಾಗಬಹುದು ಎಂಬುದು ಮೆಟ್ರೋ ಅಧಿಕಾರಿಗಳ ಅಭಿಮತ.
ಬಿಎಂಟಿಸಿಯಲ್ಲಿ ಈ ಹಿಂದೆ 30 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಈಗ ಪ್ರತಿದಿನ 40 ಲಕ್ಷ ಜನರು ಪ್ರಯಾಣಿಸುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.