ರಾಮನಗರ: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ಕಾರ್ಯಕರ್ತರು ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸ ಮಾಡಿ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮಸೇನೆ ಹೆಸರಲ್ಲಿ ಗೂಂಡಾಗಿರಿ ನಡೆಸುವ ಕೆಲಸವಾಗುತ್ತಿದೆ. ದೇವರ ಹೆಸರು ಹೇಳಿಕೊಂಡು ಶ್ರೀರಾಮನಿಗೆ ಕಳಂಕ ತರುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದ್ದಾರೆ.
ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಇಂತಹ ದಾಂಧಲೆ ಮಾಡುವುದು ಸರಿಯಲ್ಲ. ಏನಾದರೂ ಅಕ್ರಮ ನಡೆಯುತ್ತಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ದೂರು ಕೊಡಬೇಕು. ಇವರೇ ದಾಳಿ ಮಾಡಿ ದಾಂಧಲೆ, ಗೂಂಡಾಗಿರಿ ನಡೆಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಕಾನೂನು ವ್ಯವಸ್ಥೆ ಪಾಲಿಸಬೇಕು. ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ರಾಮನ ಹೆಸರಲ್ಲಿ ಸಂಘಟನೆಯ ಕಾರ್ಯಕರ್ತರು ಇಂತಹ ಕೃತ್ಯ ಎಸಗಿರುವುದನ್ನು ಹಿಂದೂ ಸಂಘಟನೆಗಳು ಖಂಡಿಸಬೇಕು. ಅನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ನಡೆಯುತ್ತ ಹೋದಲ್ಲಿ ಮಂಗಳೂರಿನ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದ್ದಾರೆ.