ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕದೇ ಸರ್ಕಾರಕ್ಕೆ ವಾಪಾಸ್ ಕಳುಹಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜ್ಯ ಪಾಲರ ನಡೆಗೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ರಾಜಭವನ ಸ್ಪಷ್ಟನೆ ನೀಡಿದೆ.
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ ಎಂದು ರಾಜಭವನ ಸ್ಪಷ್ಟನೆ ನೀಡಿದೆ. ಸುಗ್ರೀವಾಜ್ಞೆ ತಿರಸ್ಕರಿಸಿಲ್ಲ, ಸರ್ಕಾರಕ್ಕೆ ವಾಪಾಸ್ ಕಳುಹಿಸಲಾಗಿದೆ. ಅಧಿವೇಶನ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯನ್ನು ಸರ್ಕಾರಕ್ಕೆ ವಾಪಾಸ್ ಕಳುಹಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಸ್ಪಷ್ಟನೆ ನೀಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕದಲ್ಲಿ ನಾಮಫಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿತ್ತು. ಅಲ್ಲದೇ ಎಲ್ಲಾ ಅಂಗಡಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಫೆ.28ರೊಳಗೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಕಾಣುವಂತೆ ಹಾಕಬೇಕು ಎಂದು ಗಡುವು ನೀಡಿತ್ತು. ಈ ಬಗ್ಗೆ ಅಂಕಿತ ಹಾಕಲು ತನ್ನ ನಿಲುವನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ ರಾಜ್ಯಪಾಲರು ಸರ್ಕಾರದ ನಿಲುವಿಗೆ ಸಹಿ ಹಾಕದೇ ಸುಗ್ರೀವಾಜ್ಞೆಯನ್ನು ವಾಪಾಸ್ ಕಳುಹಿಸಿದ್ದಾರೆ. ರಾಜ್ಯಪಾಲರ ಈ ನಡೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.