ಮೈಸೂರು: ಗಂಡು ಮಗುವಿಗೆ ಹೆಸರಿಡಲು ದಂಪತಿ ನಡುವಿನ ಭಿನ್ನಾಭಿಪ್ರಾಯವನ್ನು ಹುಣಸೂರಿನ 8ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಬಗೆಹರಿಸಿದೆ.
ಮಗುವಿಗೆ ಆದಿ ಎಂದು ಹೆಸರಿಡಲು ಪತಿ ದಿವಾಕರ್ ಬಯಸಿದ್ದರು. ವಂಶಿಕ್ ಎಂದು ಹೆಸರಿಡಲು ಪತ್ನಿ ಅಶ್ವಿನಿ ಇಚ್ಚಿಸಿದ್ದರು. ಇಬ್ಬರಲ್ಲಿಯೂ ಗಂಡು ಮಗುವಿಗೆ ನಾಮಕರಣ ಮಾಡಲು ಒಮ್ಮತ ಮೂಡಿರಲಿಲ್ಲ. ಇದರಿಂದಾಗಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದು, ಒಂದೂವರೆ ವರ್ಷದಿಂದ ತವರು ಮನೆಯಲ್ಲಿದ್ದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ, 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೋವಿಂದಯ್ಯ ಅವರು ಹೆಸರಿನಲ್ಲಿ ಮಗುವಿಗೆ ಹೆಸರಿಡುವುದರಲ್ಲಿ ಏನಿದೆ? ಮಗುವಿಗೆ ಉತ್ತಮ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದ್ದಾರೆ.
ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೌಮ್ಯ ಅವರು ಮಗುವಿಗೆ ಆರ್ಯವರ್ಧನ್ ಎಂದು ಹೆಸರು ಸೂಚಿಸಿದ್ದಾರೆ. ನ್ಯಾಯಾಧೀಶ ಗೋವಿಂದಯ್ಯ ಅವರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಗುವಿಗೆ ಅದೇ ಹೆಸರಡಿ ಎಂದು ಹೇಳಿ ಮಗುವಿಗೆ ಸಿಹಿ ತಿನ್ನಿಸಿದ್ದು, ಇದಕ್ಕೆ ದಂಪತಿ ಕೂಡ ಸಮ್ಮತಿಸಿದ್ದಾರೆ.