ಮಂಗಳೂರು: ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಆರಂಭವಾಗಿದೆ. ಮೂರು ತಂಡಗಳ ನಡುವೆ ಗಲಾಟೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯ ತಂಡ, ಡಿಸಿಎಂ ಡಿ.ಕೆ.ಶಿವಕುಮಾರ್ ತಂಡ ಹಾಗೂ ಸಚಿವ ಸತೀಶ್ ಜಾರಕಿಹೊಳಿ ತಂಡ ಹೀಗೆ ಮೂರು ತಂಡಗಳು ಕೆಲಸ ಮಾಡುತ್ತಿವೆ. ಆಂತರಿಕ ಗಲಾಟೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಗೃಹ ಸಚಿವ ಪರಮೇಶ್ವರ್ ಅವರ ಮನೆಯಲ್ಲಿ ಡಿನ್ನರ್ ಮೀಟಿಂಗ್ ಮಾಡಲಾಗಿದೆ ಎಂದರು.
ಮುಂದೆಯೂ ರೆಸಾರ್ಟ್ ರಾಜಕಾರಣ ಆರಂಭವಾಗಲಿದೆ. ಕಾಂಗ್ರೆಸ್ ಆಂತರಿಕ ಜಗಳದಿಂದಲೇ ಸರ್ಕಾರ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ, ಜನಪ್ರತಿನಿಧಿಗಳ ಮೇಲೆ ಕೇಸ್ ಹಾಕಲಾಗುತ್ತಿದೆ. ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಸರ್ಕಾರ ಪೊಲೀಸ್ ಇಲಾಖೆ ಬಳಸಿಕೊಂಡು ಎಫ್ ಐ ಆರ್ ದಾಖಲಿಸುತ್ತಿದೆ. ಸರ್ಕರದ ಕ್ರಮ ಖಂಡಿಸಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.